ಬೆಂಗಳೂರು : ನಾವು ಸಂವಿಧಾನದ ಮಾಲೀಕರು. ಸಂವಿಧಾನ ಕಿತ್ತು ಎಸೆಯುವುದರಲ್ಲಿ ನಮ್ಮ ಆಸಕಿಯಿಲ್ಲ, ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಬೇಕು ಎಂಬ ಅಬ್ರಹಾಂ ಲಿಂಕನ್ ಅವರ ಮಾತುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಲ್ಲೇಖಿಸಿದರು

ನಗರದ ಅರಮನೆ ಮೈದಾನದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ ವಿರುದ್ಧ ಎರಡು ಅಪಪ್ರಚಾರಗಳು ನಡೆಯುತ್ತಿದೆ. ಸಂವಿಧಾನ ದಲಿತರ ಉದ್ದಾರಕ್ಕಾಗಿದೆ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸ್ಪಷ್ಟವಾಗಿ ಹೇಳುವುದರಿಂದ ಇದರ ವಿರುದ್ಧ ಇರುವ ಜನರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅರಿಯಬೇಕು. 1950 ಜನವರಿ 26 ರಿಂದ ಜಾರಿಗೆ ಬಂದಾಗಿನಿಂದ ಈ ಅಪಪ್ರಚಾರ ನಡೆಯುತ್ತಿದೆ. ಇದನ್ನು ನಾವು ಯಾರೂ ಸಹಿಸಬಾರದು. ಸಂವಿಧಾನ ರಕ್ಷಣೆಯಾದರೆ ನಾವೆಲ್ಲರೂ ಉಳಿಯುತ್ತೇವೆ. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುತ್ತೇವೆ ಎಂದರು.

*ಸಾಮಾಜಿಕ ಅಸಮಾನತೆಯನ್ನು ಅಳಿಸಿಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿ*
ದೇಶದಲ್ಲಿ ಅಸಮಾನತೆಯನ್ನು ತೊಲಗಿಸಬೇಕು. ನಾವು ವೈರುಧ್ಯ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಾಮಾಜಿಕ, ಆರ್ಥಿಕ ಅಸಮಾನತೆಯುಳ್ಳ ಸಮಾಜದಲ್ಲಿ ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ಅಸಮಾನತೆಯಿಂದ ನರಳುವವರು ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದರು. ಸಾಮಾಜಿಕ ಅಸಮಾನತೆಯನ್ನು ಅಳಿಸಿಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿ. ಸಂವಿಧಾನ ಯಶಸ್ವಿಯಾಗಲು ಇದು ಯಾರ ಕೈಯಲ್ಲಿ ಇದೆ ಎನ್ನುವುದು ಮುಖ್ಯ
ಸಂವಿಧಾನ, ಸಮಾನತೆ, ಮಾನವ ಸಮಾಜದ ನಿರ್ಮಾಣದ ಪರವಾಗಿರುವವರ ಕೈಯಲ್ಲಿದ್ದರೆ ಸಂವಿಧಾನ ಯಶಸ್ವಿಯಾಗುತ್ತದೆ. ಸಂವಿಧಾನಕ್ಕೆ ವಿರುದ್ಧವಾಗಿರುವವರ ಕೈಯಲ್ಲಿದ್ದರೆ ನಮಗೆ ಉಳಿಗಾಲವಿಲ್ಲ. ಸಂವಿಧಾನದ ಆಶಯಗಳು ಈಡೇರಲು ಸಂವಿಧಾನದ ಪರವಾಗಿರುವವರ ಕೈಯಲ್ಲಿ ಅಧಿಕಾರವಿರಬೇಕು ಎಂದರು.

ಸಂವಿಧಾನ ಜಾರಿಯಾದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಸಂವಿಧಾನದ ಪೀಠಿಕೆ, ಆಶಯಗಳನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕೆಂದು 2024 ಜನವರಿ 26 ರಿಂದ ರಾಜ್ಯದಲ್ಲಿ ಸಂವಿಧಾನ ಜಾಥಾ ಹಮ್ಮಿಕೊಳ್ಳಲಾಗಿದೆ. 31 ಜಿಲ್ಲೆಗಳಲ್ಲಿ ಸಂವಿಧಾನದ ಉದ್ದೇಶ, ಅಗತ್ಯ, ಅನಿವಾರ್ಯತೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗಿದೆ. ಎರಡು ದಿನಗಳ ಕಾಲ ರಾಷ್ಟ್ರೀಯ ಏಕತೆ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

*ಶ್ರೇಷ್ಠ ಸಂವಿಧಾನ*
ಸಂವಿಧಾನವನ್ನು ಓದುವಂತೆ ಸಲಹೆ ನೀಡಿದ ಮುಖ್ಯಮಂತ್ರಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅನೇಕ ದೇಶಗಳ ಸಂವಿಧಾನ ಓದಿ ಅರ್ಥ ಮಾಡಿಕೊಂಡು ದೇಶದ ಸಮಸ್ಯೆಗಳಿಗೆ ಅಪರಿಹಾರ ಸೂಚಿಸುವ ರೀತಿಯಲ್ಲಿ ಸಂವಿಧಾನ ರಚಿಸಿದ್ದಾರೆ. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನ ಎಂದರು.

 

ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳು ಅತ್ಯುತ್ತಮ ಚಟುವಟಿಕೆ ಆಯೋಜಿಸಿದ್ದ ತುಮಕೂರು ಜಿಲ್ಲೆ, ದಾವಣಗೆರೆ, ಮೈಸೂರು, ಕೊಡಗು, ಬಳ್ಳಾರಿ ಜಿಲ್ಲೆಗಳಿಗೆ ಬಹುಮಾನ ಹಾಗೂ ನೆನಪಿನ ಕಾಣಿಕೆ ವಿತರಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಡಾ: ಹೆಚ್.ಸಿ.ಮಹದೇವಪ್ಪ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ , ಸಚಿವ ಪ್ರಿಯಾಂಕ ಖರ್ಗೆ ಶಾಸಕ ಸೋಮಶೇಖರ್,ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಉಪಸ್ಥಿತರಿದ್ದರು.