ಮೂಡಲಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬೆಳಗಾವಿ ಜಿಲ್ಲೆಯ 5 ಲಕ್ಷ 60 ಸಾವಿರ ರೈತರ ಬ್ಯಾಂಕ್ ಖಾತೆಗಳಿಗೆ 112.10 ಕೋಟಿ ರೂ. ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಿದ್ದಾರೆ ಇದು ಮೋದಿ ಸರ್ಕಾರದ ಗ್ಯಾರಂಟಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.
ಬುಧವಾರ ಫೆ.28 ರಂದು ಪತ್ರಿಕಾ ಹೇಳಿಕೆ ನೀಡಿದ ಸದಸ್ಯ ಈರಣ್ಣ ಕಡಾಡಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಭಾಗವಾಗಿ ದೇಶದ 9 ಕೋಟಿಗೂ ಅಧಿಕ ರೈತರಿಗೆ 21,000 ಕೋಟಿ ರೂ ಸೇರಿದಂತೆ ರಾಜ್ಯದ 48.61 ಲಕ್ಷ ರೈತರ ಖಾತೆಗೆ 972.26 ಕೋಟಿ ರೂಪಾಯಿ ನೇರವಾಗಿ ಫಲಾನುಭವಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಿದ್ದಾರೆ. ಇದು ವಿಶ್ವದ ಅತಿದೊಡ್ಡ ಡಿಬಿಟಿ ಯೋಜನೆಗಳಲ್ಲಿ ಒಂದಾಗಿದೆ ಎಂದರು.
ಕಳೆದ 10 ವರ್ಷಗಳಲ್ಲಿ ಕೃಷಿ ಬಜೆಟ್ 5 ಪಟ್ಟು ಹೆಚ್ಚಳವಾಗಿದೆ. ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ 16 ಕೋಟಿಗೂ ಹೆಚ್ಚಿನ ರೈತರಿಗೆ ರೂ.1.56 ಲಕ್ಷ ಕೋಟಿ ರೂ. ಪಾವತಿಸಲಾಗಿದೆ. 2 ಲಕ್ಷಕ್ಕೂ ಅಧಿಕ ಪ್ರಧಾನ ಮಂತ್ರಿ ಕಿಸಾನ್ ಸಮೃದ್ದಿ ಕೇಂದ್ರಗಳ ಸ್ಥಾಪನೆಯಾಗಿವೆ. ಇ-ನಾಮ್ ಪೋರ್ಟಲ್ ನಲ್ಲಿ ಸುಮಾರು 1.77 ಕೋಟಿ ರೈತರು ಹಾಗೂ 1389 ಇ-ನಾಮ್ ಮಾರುಕಟ್ಟೆಗಳ ನೊಂದಣಿಯಾಗಿವೆ. ಮೋದಿ ಸರ್ಕಾರ ರೈತರು ಸಬಲರಾಗಬೇಕು ಮತ್ತು ಸಮೃದ್ದರಾಗಬೇಕು ಎನ್ನುವ ಕಳಕಳಿಯನ್ನು ಹೊಂದಿದ್ದು, ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರಲ್ಲದೇ ದೇಶದ ಬೆನ್ನೆಲುಬಾಗಿರುವ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸದಾ ಕಾಲ ಇರಲಿದೆ ಎಂದು ಈರಣ್ಣ ಕಡಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.