ಬೆಳಗಾವಿ : ಇಲ್ಲಿಯ ಅನಗೋಳದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ನಿರ್ಮಿಸಿದ್ದ ಜೈ ಮಹಾರಾಷ್ಟ್ರ ಚೌಕ್ ಎಂಬ ನಾಮಫಲಕವನ್ನು ಕೊನೆಗೂ ಪೊಲೀಸರು ತೆರವುಗೊಳಿಸಿದ್ದಾರೆ.
ನಾಮಫಲಕ ತೆರವುಗೊಳಿಸದಂತೆ ಒತ್ತಾಯಿಸಿ ಕರುನಾಡು ವಿಜಯ ಸೇನೆ ಸಂಘಟನೆ ಕಾರ್ಯಕರ್ತರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಆಯುಕ್ತರ ಕಾರಿಗೆ ಗುರುವಾರ ಮುತ್ತಿಗೆ ಹಾಕಿ ರಾತ್ರಿ ಪಾಲಿಕೆ ಎದುರು ಧರಣಿ ನಡೆಸಿದ್ದಾರೆ. ಆದರೂ ಪ್ರಯೋಜನವಾಗಿರಲಿಲ್ಲ. ಈ ನಿಟ್ಟಿನಲ್ಲಿ ಕನ್ನಡ ಹೋರಾಟಗಾರರು ಪಾಲಿಕೆ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹೇರಿದರು.
ಕೊನೆಗೂ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆಗ ಸಮಿತಿಯ ಕೆಲ ಸದಸ್ಯರು ಫಲಕ ತೆರವುಗೊಳಿಸಿದಂತೆ ಎಚ್ಚರಿಕೆ ರವಾನಿಸಿದರು. ಅದಕ್ಕೆ ಕಿವಿಗೊಡದ ಪೊಲೀಸರು ಫಲಕ ತೆರವು ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.