ಘಟಪ್ರಭಾ: ಇಡೀ ದೇಶವನ್ನು ಸುತ್ತಾಡಿದ ಬಳಿಕ ನನಗಾದ ಅನುಭವ ಎಂದರೆ ಜನರ ಸಹಭಾಗಿತ್ವ ಇಲ್ಲದೇ ಈ ರಾಷ್ಟ್ರದಲ್ಲಿ ಯಾವ ಯೋಜನೆಯೂ ಯಶಸ್ವಿಯಾಗುವುದಿಲ್ಲ. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಏನಾದರೂ ಬದಲಾವಣೆ ತರಲು ಸಾಧ್ಯ ಹೀಗಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಗ್ರಾಮಗಳು ಬದಲಾವಣೆಯ ಬೆಳಕು ಕಾಣಬೇಕು. ಪ್ರತಿ ಗ್ರಾಮಸ್ಥನೂ ತನ್ನ ಗ್ರಾಮದ ಪರಿಸರ ಮತ್ತು ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಗುರುವಾರ ಫೆ-29 ರಂದು ಗೋಕಾಕ ತಾಲೂಕಿನ ಸಂಸದರ ಆದರ್ಶ ಗ್ರಾಮ ನಲ್ಲಾನಟ್ಟಿಯಲ್ಲಿ ಸನ್ 2022-23ನೇ ಸಾಲಿನ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಡಿ ಗದಾಡಿ ತೋಟದ ಶ್ರೀ ಕರೆಮ್ಮದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಇದು ಹಣದ ಯೋಜನೆ ಅಲ್ಲ. ಜನ ಹಿತದ ಯೋಜನೆ. ಎಲ್ಲವನ್ನೂ ಒಂದೇ ದಿನದಲ್ಲಿ ಬದಲಾವಣೆ ಮಾಡಿಬಿಡುತ್ತೇನೆ ಎಂದು ನಾನು ಹೇಳುವುದಿಲ್ಲ. ಈ ಯೋಜನೆಯಿಂದಲೇ ಎಲ್ಲ ಗ್ರಾಮಗಳು ಅಭಿವೃದ್ಧಿಯಾಗಿ ಬಿಡುತ್ತವೆ ಎಂದೂ ಹೇಳುವುದಿಲ್ಲ. ಮೊದಲು ಕೆಲಸ ಮಾಡೋಣ. ಕಾಲಕ್ರಮೇಣ ಬದಲಾವಣೆ ಮತ್ತು ಅಭಿವೃದ್ಧಿ ತಾವಾಗಿಯೇ ಗೋಚರಿಸುತ್ತವೆ ಎಂದು ಈರಣ್ಣ ಕಡಾಡಿ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ರಾಜ್ಯಸಭಾ ಸದಸ್ಯರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಡಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಕಾಮಗಾರಿಯನ್ನು ವಿಕ್ಷೀಸಿದರು.
ದಶರಥ ಪಾಟೀಲ, ಬಸು ಗದಾಡಿ, ಮಾರುತಿ ಮೆಳವಂಕಿ, ಭೀಮಪ್ಪ ಗದಾಡಿ, ಲಗಮಣ್ಣ ಕುಳ್ಳೂರ, ಪ್ರಕಾಶ ಗದಾಡಿ, ಪ್ರಕಾಶ ಜಾಗನೂರ, ಮಲ್ಲಪ್ಪ ಪೂಜೇರಿ, ಅಡಿವೆಪ್ಪ ಬಿಲಕುಂದಿ, ರಂಗಪ್ಪ ಕುಳ್ಳೂರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.