ಬೆಳಗಾವಿ: ರೈತರಿಗೆ ಮೋಸ ಮಾಡಿದರೆ ಯಾವುದೇ ಉದ್ಯಮ ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ಯಾರ ವಿಶ್ವಾಸವನ್ನೂ ಕಳೆದುಕೊಳ್ಳದೆ, ಯಾರಿಗೂ ತೊಂದರೆ ಕೊಡದೆ ಉದ್ಯಮ ನಡೆಸಿಕೊಂಡು ಹೋಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದಲ್ಲಿ ಭಾನುವಾರ, ವೆಂಕಟೇಶ್ವರ ಗೋಡಂಬಿ ಸಂಸ್ಕರಣಾ ಕಾರ್ಖಾನೆಯ ವಾಸ್ತುಶಾಂತಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮಹಾರಾಷ್ಟ್ರದಿಂ ದ ಬಂದು ಇಲ್ಲಿನ ರೈತರಿಗಾಗಿ ಗೋಡಂಬಿ ಕಾರ್ಖಾನೆ ಆರಂಭಿಸಿರುವುದು ಸ್ವಾಗತಾರ್ಹ. ಈವರೆಗೆ ಇಲ್ಲಿನ ರೈತರಿಂದ ಗೋಡಂಬಿ ಖರೀದಿಸಿ ಮಹಾರಾಷ್ಟ್ರಕ್ಕೆ ಒಯ್ಯಲಾಗುತ್ತಿತ್ತು. ಆದರೆ ದಲ್ಲಾಳಿಗಳು ರೈತರಿಗೆ ಮೋಸ ಮಾಡುತ್ತಿದ್ದರು. ಈಗ ಇಲ್ಲೇ ಕಾರ್ಖಾನೆ ಆರಂಭವಾಗುತ್ತಿರುವುದರಿಂದ ರೈತರಿಗೆ ಅನುಕೂಲವಾಗಲಿದೆ. ಆದರೆ ಕಾರ್ಖಾನೆಯವರು ನಮ್ಮ ರೈತರಿಗೆ ಮೋಸ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿತ್ತು. ಈಗ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಇಂತಹ ಫ್ಯಾಕ್ಟರಿಗಳು ಬಂದರೆ ಬಹಳ ಬೇಗ ಅಭಿವೃದ್ಧಿಯಾಗುತ್ತದೆ. ಈ ಕಾರ್ಖಾನೆಯಲ್ಲಿ 500 ಜನರಿಗೆ ಉದ್ಯೋಗಾವಕಾಶವಿದೆ. ಇನ್ನಷ್ಟು ಉದ್ಯಮಗಳು ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಬರಲಿವೆ. ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿ ಸರಸ್ವತಿ ಸವಿತಾನಂದರು, ಯುವರಾಜ ಕದಂ, ವೆಂಕಟೇಶ್ವರ ಕೋ-ಆಪ್ ಪಾವರ್ ಮತ್ತು ಅಗ್ರೋ ಪ್ರೊಸೆಸಿಂಗ್ ಲಿಮಿಟೆಡ್ ನ ಅಧ್ಯಕ್ಷ ಶಿವಾಜಿ ಶ್ಯಾ ಡೋಳೆ, ನಿರ್ದೇಶಕರಾದ ಯಲ್ಲಪ್ಪ ಜಾಂಗ್ರೂಚೆ, ಮುಕ್ತಾ, ಲಿಂಗರಾಜ ಪಾಟೀಲ, ಜ್ಯೋತಿ ಸುರಸಿ ಮುಂತಾದವರು ಇದ್ದರು.