ಬೆಳಗಾವಿ : ಮಾಜಿ ಡಿಸಿಎಂ ಹಾಗೂ ಹಾಲಿ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಹಾಡಿ ಹೊಗಳಿದ್ದಾರೆ.
ಅಥಣಿಯ ಕೊಟ್ಟಲಗಿಯ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮಾತಿನ ಮುಖ್ಯಾಂಶಗಳು:
“ಬಿಜೆಪಿಗೆ ಸುಳ್ಳೇ ಮನೆದೇವರು. ಯಾವುದೇ ದೊಡ್ಡ ಕಾರ್ಯಕ್ರಮವನ್ನು ತರುವಲ್ಲಿ ಅವರಿಂದ ಸಾಧ್ಯವಿಲ್ಲ. ಬಿಡಿಗಾಸು ಸಹ ಅವರಿಂದ ರಾಜ್ಯಕ್ಕೆ ದೊರೆಯುತ್ತಿಲ್ಲ. ಜನರ ಮನದಲ್ಲಿ ಉಳಿಯುವ ಕಾರ್ಯಕ್ರಮವನ್ನು ಬಿಜೆಪಿ ನೀಡಿದ್ದೆ ಆದಲ್ಲಿ ನಾನು ಅವರಿಗೆ ಶರಣಾಗಲು ಸಿದ್ಧ.
ಅಥಣಿ ತಾಲೂಕಿನ ಪಾಲಿಗೆ ಇದೊಂದು ಐತಿಹಾಸಿಕ ಮತ್ತು ಪವಿತ್ರವಾದ ದಿನ. ನಾನು ಆಗಾಗ ಒಂದು ಮಾತು ಹೇಳುತ್ತಿರುತ್ತೇನೆ. ನಾನು ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡ ಸಂದರ್ಭದಲ್ಲಿ ನಮ್ಮ ನೀರು ನಮ್ಮ ಹಕ್ಕು ಮಾಡುತ್ತಿದ್ದೇವೆ ಎಂದರೆ ಬುದ್ಧ- ಬಸವ ಮನೆ ಬಿಟ್ಟ ಘಳಿಗೆಯಲ್ಲಿ, ಪೈಗಂಬರ್ ದಿವ್ಯ ವಾಣಿ ಕೇಳಿದ ಘಳಿಗೆಯಲ್ಲಿ, ಮಹಾತ್ಮ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿದ ಘಳಿಗೆಯಲ್ಲಿ, ಸೋನಿಯಾ ಗಾಂಧಿ ಈ ದೇಶಕ್ಕೋಸ್ಕರ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದ ಘಳಿಗೆಯಲ್ಲಿ ಮತ್ತು ಮನಮೋಹನ್ ಸಿಂಗ್ ಆರ್ಥಿಕ ತಜ್ಞ ಈ ರಾಷ್ಟ್ರವನ್ನು ಮುನ್ನಡೆಸಿದ ಘಳಿಗೆಯಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ ಅಂತ ಹೇಳಿದ್ದೆ.
ಅದೇ ರೀತಿ ಲಕ್ಷ್ಮಣ ಸವದಿ ನಮ್ಮ ಮಿತ್ರರು. ಅವರು ಎಷ್ಟು ಬುದ್ಧಿವಂತರೆಂದರೆ ಈ ಏಳು ತಿಂಗಳಲ್ಲಿ ಎರಡು ಬಾರಿ ನಮ್ಮನ್ನು ತಮ್ಮ ತಾಲೂಕಿಗೆ ಕರೆಸಿಕೊಂಡು, ಅಂತದ್ದೆ ದೊಡ್ಡ ಕಾರ್ಯಕ್ರಮ ಮಾಡಿದರು. ಅದರೊಂದಿಗೆ ನುಡಿದಂತೆ ನಡೆಯಲು ಕಾರಣರಾಗಿದ್ದಾರೆ.
ಬಸವಣ್ಣನ ನಾಡು, 120 ಮಠಗಳಿರುವ ಈ ಪುಣ್ಯಭೂಮಿಯಲ್ಲಿ ಈ ಕಾರ್ಯಕ್ರಮ ನಡೆಸಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲ ಸೇರಿ ಅವರಿಗೆ ಚಿರಋಣಿಯಾಗಿದ್ದೇವೆ. ನೀವೆಲ್ಲ ಸೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಕೊಟ್ಟು ಇಡೀ ರಾಜ್ಯದಲ್ಲಿ 136 ಶಾಸಕರನ್ನು ಆಯ್ಕೆ ಮಾಡುವ ಮೂಲಕ ನುಡಿದಂತೆ ನಡೆಯಲು ಶಕ್ತಿ ಕೊಟ್ಟಿದ್ದಕ್ಕೆ ನಿಮಗೆ ಸಾಷ್ಟಾಂಗ ನಮಸ್ಕಾರ ಅರ್ಪಿಸುತ್ತಿದ್ದೇನೆ.
ಇಂದು ನಮ್ಮ ಈ ಎಲ್ಲಾ ತಾಯಂದಿರನ್ನು ನೋಡಬೇಕು. ಶಕ್ತಿ ಯೋಜನೆಯಿಂದ ಎಲ್ಲರೂ ಪ್ರಯಾಣ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಅಕ್ಕಂದಿರ ಖಾತೆಗೆ ಗ್ಯಾರಂಟಿ ಯೋಜನೆಯ ಹಣ ಹೋಗುತ್ತಿದೆ. ಅವರ ಭಾವನೆ, ನಗುಮುಖ ಹೇಗಿದೆ? ಅವರನ್ನು ನೋಡಲು ನಾವೆಲ್ಲ ಇಲ್ಲಿಗೆ ಬಂದಿದ್ದೇವೆ. ಅಮ್ಮಾಜೇಶ್ವರಿ ನೀರಾವರಿ ಯೋಜನೆ ಶಂಕುಸ್ಥಾಪನೆ ಮಾಡಿದ್ದೇವೆ. ಇದೊಂದು ಬಹಳ ದೊಡ್ಡ ಯೋಜನೆ. ಈ ಯೋಜನೆ ಮೂಲಕ ಈ ಭಾಗದ ಜನರ ಬದುಕು ಹಸನಾಗಲಿದೆ ಎಂದು ಅವರು ಹೇಳಿದರು.
ಜನರಿಗೆ ಅನ್ನಭಾಗ್ಯ, ಗೃಹ ಲಕ್ಷ್ಮಿ ಮುಂತಾದ ಯೋಜನೆಗಳ ಬಗ್ಗೆ ತಿಳಿಸಿ ಹೇಳಬೇಕು. ಈ ಯೋಜನೆಯಿಂದ ಐದು ವರ್ಷಕ್ಕೆ ನಾಲ್ಕು ಲಕ್ಷ ರೂಪಾಯಿ ನಾಗರಿಕರಿಗೆ ಸಿಗುತ್ತದೆ. ಇದಕ್ಕಿಂತ ದೊಡ್ಡದು ಏನು ಮಾಡಬೇಕು. ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮಣ ಸವದಿ ಅವರು ಬಹಳ ಅಭಿನಂದನೆಯ ಕೆಲಸ ಮಾಡಿದ್ದಾರೆ. ಅಮ್ಮಾಜೇಶ್ವರಿ ನೀರಾವರಿ ಯೋಜನೆಯನ್ನು ಎರಡು ವರ್ಷದಲ್ಲಿ ಮುಗಿಸುವ ಸಮಯ ಕೊಡುತ್ತೇನೆ. ನಂತರ ನಾವೇ ಬಂದು ಇದರ ಚಾಲನೆ ನೀಡಬೇಕು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಳಸ ಬಂಡೂರಿ ಯೋಜನೆ ಬಗ್ಗೆ ದೊಡ್ಡ ಹಬ್ಬ ಮಾಡಿದರು. ಆದರೆ ಅವರದ್ದೇ ಕೇಂದ್ರ ಸರ್ಕಾರದಿಂದ ಅನುಮತಿ ಪತ್ರ ಕೊಡಲು ಅವರಿಂದ ಸಾಧ್ಯವಾಗುತ್ತಿಲ್ಲ. 27 ಎಂಪಿಗಳು, ಬಲಿಷ್ಠ ಸರ್ಕಾರ ಇದ್ದರೂ ಇನ್ನೂ ಯೋಜನೆ ಪ್ರಾರಂಭ ಮಾಡಿಲ್ಲ. ಯಾವುದೇ ದೊಡ್ಡ ಯೋಜನೆಯನ್ನು ಜಾರಿಗೆ ತಂದಿಲ್ಲ. ಬಿಡಿಗಾಸು ಕೊಡಲು ಬಿಜೆಪಿಯವರಿಂದ ಸಾಧ್ಯವಿಲ್ಲ. ಮತ ಕೇಳಲು ಅವರಿಗೆ ಯಾವ ಹಕ್ಕು ಇಲ್ಲ. ಕಾಂಗ್ರೆಸ್ ಪಕ್ಷ ಜನರ ಕಷ್ಟ ಕಾರ್ಪಣ್ಯದಲ್ಲಿ ಸಹಭಾಗಿಯಾಗಿ ಜನಪರ ಕಾರ್ಯಕ್ರಮ ನಡೆಸುವ ಮೂಲಕ ಜನರ ಮನದಲ್ಲಿದೆ.
ಸವದಿಯವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಆದರೆ ಸಂಸತ್ತಿಗೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಸಂಸದರನ್ನು ನೀವು ಕೊಡಬೇಕು. ಅಲ್ಲಿಯವರೆಗೆ ನಾನು ಏನು ಹೇಳುವುದಿಲ್ಲ ಎಂದು ತಿಳಿಸಿದರು. ಲಕ್ಷ್ಮಣ ಸವದಿ ಅವರು ಅಥಣಿ ತಾಲೂಕಿನಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಿದ್ದಾರೆ. ಇದನ್ನು ನೋಡಿ ನಾನು ನನ್ನ ಸಹೋದರ ಡಿ.ಕೆ. ಸುರೇಶ್ ಅವರ ಕಡೆ ಹೇಳಿದೆ. ಕೊನೆಗೆ ಅಧಿಕಾರಿಗಳನ್ನು ಕರೆಸಿ ಈ ಬಗ್ಗೆ ಮಾತನಾಡಿ ಚರ್ಚಿಸಿದ್ದೆ. ಇದೀಗ ಕೃಷಿ ವಿಶ್ವವಿದ್ಯಾಲಯವನ್ನು ಸವದಿ ಅವರು ಕೇಳುತ್ತಿದ್ದಾರೆ. ಬೆಂಗಳೂರಿನ ಖಜಾನೆಯನ್ನು ನಮಗೆ ಕೊಡಿ ಎಂದು ಕೇಳಿಲ್ಲ. ಹೀಗೆ ಕೇಳುವುದು ನಿಮ್ಮ ತಪ್ಪಲ್ಲ. ನಿಮ್ಮ ಋಣ ತೀರಿಸಬೇಕು ಅಲ್ಲವೇ.
ಆಗಾಗ ನಾನು ಒಂದು ಮಾತು ಹೇಳುತ್ತಿರುತ್ತೇನೆ. ಮನುಷ್ಯ ಹುಟ್ಟುವಾಗ ನಾಲ್ಕು ಋಣದಿಂದ ಹುಟ್ಟುತ್ತಾನಂತೆ. ತಂದೆ-ತಾಯಿ, ದೇವರು, ಗುರು ಮತ್ತು ಸಮಾಜದ ಋಣ. ಈ ಋಣವನ್ನು ಧರ್ಮದಿಂದ ನಾವು ತೀರಿಸಬೇಕು. ಈ ನಿಟ್ಟಿನಲ್ಲಿ ಸಮಾಜದ ಅಭಿವೃದ್ದಿಗೆ ತೊಡಗಿಸಿಕೊಂಡ ಸವದಿ ಅವರನ್ನು ಬಹುದೊಡ್ಡ ಅಂತರದಿಂದ ಗೆಲ್ಲಿಸಿ ದಾಖಲೆ ನಿರ್ಮಿಸಿದ್ದೀರಿ. ನನಗೆ ಮಂತ್ರಿ ಸ್ಥಾನ ಕೊಡದೆ ಇದ್ದರೂ ಚಿಂತೆ ಇಲ್ಲ, ತಾಲೂಕಿನ ಜನರ ಋಣ ತೀರಿಸಬೇಕು, ಈ ಕ್ಷೇತ್ರದ ಜನರ ಅಭಿವೃದ್ಧಿ ಮುಖ್ಯ ಎಂದು ಅವರು ಹೇಳಿದ್ದರು. ಅದರಂತೆ ಈಗ ತಾಲೂಕಿನಲ್ಲಿ ಇಷ್ಟು ದೊಡ್ಡ ಯೋಜನೆಗಳನ್ನು ಅವರು ಜಾರಿ ಮಾಡುತ್ತಿದ್ದಾರೆ. ಇಂತಹ ಶಾಸಕರನ್ನು ಪಡೆದುಕೊಂಡ ನೀವೆಲ್ಲ ಭಾಗ್ಯವಂತರು, ಪುಣ್ಯವಂತರು, ಅದೃಷ್ಟವಂತರು ಎಂದು ಹೇಳಲು ನಾನು ಬಯಸುತ್ತೇನೆ.
ಈ ಹಿಂದಿನ ಬಿಜೆಪಿ ಸರಕಾರಕ್ಕೆ ಶಕ್ತಿ ಇರಲಿಲ್ಲ. 38 ಶಾಸಕರನ್ನು ದಳ, 78 ಶಾಸಕರನ್ನು ಕಾಂಗ್ರೆಸ್ ಹೊಂದಿತ್ತು. 104 ಶಾಸಕರನ್ನು ಹೊಂದಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಒಂದೂವರೆ ವರ್ಷಗಳ ಕಾಲ ಸರ್ಕಾರ ಮಾಡಿದೆವು. ಆದರೆ ಬಿಜೆಪಿಯವರು ತಮಗೆ ಬಹುಮತ ಇಲ್ಲದೆ ಇದ್ದರೂ ಆಪರೇಷನ್ ಕಮಲ ಮಾಡಿದರು. ಸವದಿ ಅವರೆ ನಮ್ಮ ಕೆಲ ಶಾಸಕರನ್ನು ಹೊಡೆದುಕೊಂಡು ಹೋದರು. ಅಲ್ವೇ ಸವದಿ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಜನ ತೀರ್ಪು ಕೊಡದೆ ಇದ್ದರೂ ಅವರು ಸರಕಾರ ರಚಿಸಿದರು. ಆದರೆ ಮೂರೂವರೆ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಗಳನ್ನುಂಟು ಮಾಡುವ ಕಾರ್ಯಕ್ರಮವನ್ನು ಅವರು ಕೊಟ್ಟಿದ್ದಾರೆ. ಅವರ ಅವಧಿಯಲ್ಲಿ ದೇವಸ್ಥಾನ, ದೇವರು ಈ ವಿಷಯಗಳನ್ನು ಬಿಟ್ಟು ಬಿಟ್ಟರೆ ಅವರು ನಿಮ್ಮ ಜೀವನದಲ್ಲಿ ಬದಲಾವಣೆ ಮಾಡುವ ಯಾವ ಕಾರ್ಯಕ್ರಮವನ್ನು ಕೊಟ್ಟಿದ್ದಾರೆ? ಅಂತಹ ಯಾವುದೇ ಕಾರ್ಯಕ್ರಮ ಕೊಟ್ಟಿದ್ದರೆ ನಾನು ಇಂದು ನಿಮ್ಮ ಮುಂದೆ ಬರಲು ಶಕ್ತಿ ಬರುತ್ತಿರಲಿಲ್ಲ.
ನಾವು ಪ್ರಜಾಧ್ವನಿ ಯಾತ್ರೆ ಮಾಡಿ ಪ್ರಾರಂಭ ಮಾಡಿ ಚಿಕ್ಕೋಡಿಯಲ್ಲಿ ಮೊದಲ ಗ್ಯಾರಂಟಿ ಘೋಷಣೆ ಮಾಡಿದೆವು.
ನಂತರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದೆವು. ಅನ್ನಭಾಗ್ಯ ಮೂಲಕ ಬಡವರಿಗೆ 10 ಕೆ.ಜಿ ಅಕ್ಕಿ. ಗೃಹ ಜ್ಯೋತಿ ಮೂಲಕ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಲಾಗಿದೆ. ಇದರಿಂದ ದೇವಸ್ಥಾನ, ಪ್ರವಾಸಿತಾಣದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವಿದ್ಯಾವಂತ ನಿರುದ್ಯೋಗಿಗಳಿಗಾಗಿ ಯುವನಿಧಿ ಯೋಜನೆ ಜಾರಿಗೆ ತಂದಿದ್ದರಿಂದ ಯುವ ಸಮೂಹಕ್ಕೆ ಅನುಕೂಲವಾಗಿದೆ. ಇಡೀ ದೇಶದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ತರುವ ಮೂಲಕ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಕೆಲಸ ಮಾಡುತ್ತಿದೆ.
ನೀವು ನಿಮ್ಮ ಸ್ನೇಹಿತರಿಗೆ ಒಂದು ಮಾತು ಹೇಳಬೇಕು. ಕಮಲ ಕೆರೆಯಲ್ಲಿದ್ದರೆ ಚಂದ. ತೆನೆ ಹೊಲದಲ್ಲಿದ್ದರೆ ಚಂದ. ಅದರೆ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಇನ್ನೂ ಚಂದ. ಗ್ಯಾರಂಟಿ ಐದು ಬೆರಳುಗಳು ಸೇರಿ ಕೈ ಗಟ್ಟಿಯಾಗಿ ಆಡಳಿತ ನಡೆಸುತ್ತಿದೆ.
ಕುಮಾರಸ್ವಾಮಿ ಇಂದು ತಮ್ಮ ದಳದ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ವಕ್ತಾರರಾಗಿದ್ದಾರೆ. ಬರೀ ಬಿಜೆಪಿಯ ಸುದ್ದಿ ಮಾತನಾಡುತ್ತಿದ್ದಾರೆ. ಅಂದರೆ ಅವರ ಸ್ಥಿತಿ ಈಗ ಏನಾಗಿರಬೇಕು? ಪಕ್ಷದಲ್ಲಿರುವ ಶಾಸಕರು ಏನಾಗಬಹುದು ಎಂಬ ಚಿಂತೆಯಲ್ಲಿ ಬಿಜೆಪಿ ತಬ್ಬಿಕೊಂಡಿದ್ದಾರೆ. ಅವರ ಮೈತ್ರಿ ಬಗ್ಗೆ ಈಗ ನಾನೇನು ಹೇಳುವುದಿಲ್ಲ. ಚುನಾವಣೆ ಮುಗಿಯಲಿ.
ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದು ಕೊಡುತ್ತೀರಿ ಎಂಬ ನಂಬಿಕೆ ಮೇಲೆ ನಾವೆಲ್ಲ ಇಲ್ಲಿಗೆ ಬಂದಿದ್ದೇವೆ. ಆದರೆ ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಾಜಿ ಮಂತ್ರಿ ಅರಗ ಜ್ಞಾನೇಂದ್ರ ಗ್ಯಾರಂಟಿ ಯೋಜನೆ, 420, ಡುಪ್ಲಿಕೇಟ್ ಎಂದು ಹೇಳುತ್ತಿದ್ದಾರೆ. ನಮ್ಮದು ಡುಪ್ಲಿಕೇಟ್ ಗ್ಯಾರಂಟಿ ಆಗಿದ್ದಲ್ಲಿ ಅವರು ತಮ್ಮ ಪಕ್ಷದವರಿಗೆ ಉಚಿತ ಯೋಜನೆಗಳು ಬೇಡ ಎಂದು ಬರೆದು ಕೊಡಲು ಹೇಳಲಿ.”