ನವದೆಹಲಿ: ಬೆಳಗಾವಿ ವಿಮಾನ ನಿಲ್ದಾಣ ವಿಸ್ತರಿತ ಟರ್ಮಿನಲ್‌ ಉದ್ಘಾಟನೆ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಶಂಕುಸ್ಥಾಪನೆಯೂ ಸೇರಿ ದೇಶಾದ್ಯಂತ 12 ಸಾವಿರ ಕೋಟಿ ರು. ಮೌಲ್ಯದ 16 ವಿಮಾನ ನಿಲ್ದಾಣ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಾ.10 ರಂದು ಏಕಕಾಲದಲ್ಲಿ ಉತ್ತರ ಪ್ರದೇಶದ ಅಜಂಗಢದಿಂದ ಚಾಲನೆ ನೀಡಲಿದ್ದಾರೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ 357 ಕೋಟಿ ರೂಪಾಯಿ ವೆಚ್ಚದಲ್ಲಿ 16,400 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಕಾಮಗಾರಿಗೆ ಪ್ರಧಾನಿ ವರ್ಚುಯಲ್ ಮೂಲಕ ಚಾಲನೆ ನೀಡುವರು. ನಾಲ್ಕು ಏರೋ ಬ್ರಿಜ್, ತಲಾ 8 ಎಕ್ಸ್ ಲೇಟರ್ ಲಿಫ್ಟ್, ಏಕಕಾಲಕ್ಕೆ ಹೊರ ಹೋಗುವ, ಒಳಬರುವ 2,400 ಪ್ರಯಾಣಿಕರನ್ನು ನಿರ್ವಹಿಸುವ ಹೊಸ ಟರ್ಮಿನಲ್ ಇದಾಗಿದೆ. 9 ವಿಮಾನಗಳ ನಿಲುಗಡೆ ವ್ಯವಸ್ಥೆ ಇರಲಿದೆ. ಪ್ರತಿ ದಿನ ಸರಾಸರಿ 24 ವಿಮಾನಗಳು ಬೆಳಗಾವಿ ವಿಮಾನ ನಿಲ್ದಾಣದಿಂದ ಸಂಚಾರ ಕೈಗೊಳ್ಳುತ್ತಿವೆ. ಬೆಳಗಾವಿಯಿಂದ ಸದ್ಯ ಬೆಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್, ಸೂರತ್, ನಾಗಪುರ, ತಿರುಪತಿ ಸೇರಿದಂತೆ ಇತರ ಮಹಾನಗರಗಳಿಗೆ ನೇರ ವಿಮಾನಯಾನ ಸಂಪರ್ಕ ಇದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸೇವೆ ಸಿಗಲಿದೆ. ಈ ಹಳೆಯ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಬೇಡಿಕೆ ಇದೆ. ಈಗ ನಿರ್ಮಾಣವಾಗುತ್ತಿರುವ ಹೊಸ ಟರ್ಮಿನಲ್ ನಿರ್ಮಾಣದ ಗುತ್ತಿಗೆಯನ್ನು ಕೆಎಂವಿ ಪ್ರಾಜೆಕ್ಟ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಈ ಟರ್ಮಿನಲ್ 3,600 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು ಬೇರೆ ನಗರಗಳಿಗೆ ತೆರಳುವ 320 ಹಾಗೂ ಇತರ ನಗರಗಳಿಂದ ಬೆಳಗಾವಿಗೆ ಆಗಮಿಸುವ 320 ಪ್ರಯಾಣಿಕರು ಸೇರಿದಂತೆ ಒಟ್ಟು 640 ಪ್ರಯಾಣಿಕರಿಗೆ ಸ್ಥಳಾವಕಾಶ ಒದಗಿಸಲಿದೆ. ಟರ್ಮಿನಲ್ ಎದುರು 500 ಕಾರು, 200 ಬೈಕ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.