ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಮೊದಲ ಪಟ್ಟಿ ಪ್ರಕಟಿಸಿದ್ದು, 39 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಶುಕ್ರವಾರ ಪ್ರಕಟಿಸಿದೆ. ರಾಹುಲ್ ಗಾಂಧಿ ಈ ಬಾರಿಯೂ ಕೇರಳದ ವಯನಾಡ್ನಿಂದ ಸ್ಪರ್ಧಿಸಲಿದ್ದಾರೆ. ಕೇರಳದ ಅಲಪ್ಪುಳದಿಂದ ಕೆ.ಸಿ.ವೇಣುಗೋಪಾಲ್, ಅತ್ತಿಂಗಳ್ನಿಂದ ಡಾ. ಶಶಿ ತರೂರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ರಾಜನಾನಂದಗಾಂವ್ನಿಂದ ಕಣಕ್ಕಿಳಿಸುವುದಾಗಿ ಪಕ್ಷ ಹೇಳಿದೆ. ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್, ತುಮಕೂರಿನಿಂದ ಮುದ್ದ ಹನುಮೇಗೌಡ, ವಿಜಯಪುರದಿಂದ ಎಸ್.ಆರ್. ಅಲಗೂರ, ಹಾವೇರಿಯಿಂದ ಆನಂದಸ್ವಾಮಿ ಗಡ್ಡದೇವರಮಠ, ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್ ಹಾಗೂ ಹಾಸನದಿಂದ ಶ್ರೇಯಸ್ ಪಟೇಲ್, ಮಂಡ್ಯದಿಂದ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಹೆಸರನ್ನು ಪಕ್ಷ ಅಂತಿಮಗೊಳಿಸಿದೆ. ಛತ್ತೀಸಗಢ 6; ಕೇರಳ– 16; ಲಕ್ಷದ್ವೀಪ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ತಲಾ 1, ಮೇಘಾಲಯ 2; ತೆಲಂಗಾಣ– 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.
ಬೆಂಗಳೂರು :
“ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಇಂದಿನ ಪಟ್ಟಿಯಲ್ಲಿ ಇನ್ನಷ್ಟು ಹೆಸರು ಪ್ರಕಟವಾಗಬೇಕಿತ್ತು. 11ರಂದು ಸ್ಕ್ರೀನಿಂಗ್ ಕಮಿಟಿ ಸಭೆ ನಂತರ ಆ ಹೆಸರುಗಳು ಅಂತಿಮವಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಹೇಳಿದ್ದಿಷ್ಟು;
“ಸ್ಥಳೀಯ ಶಾಸಕರು, ಮುಖಂಡರ ಜತೆ ಚರ್ಚೆ ಮಾಡಿದಾಗ ಅವರು ಯಾರ ಹೆಸರನ್ನ ಪ್ರಸ್ತಾಪ ಮಾಡಿರುತ್ತಾರೋ ಹಾಗೂ ನಮ್ಮ ಸಮೀಕ್ಷೆಗಳ ಆಧಾರದ ಮೇಲೆ ನಾವು ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. 11ರಂದು ನಡೆಯಲಿರುವ ಸಭೆ ನಂತರ ಮತ್ತಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.”
17 ಕ್ಷೇತ್ರಗಳಿಗೆ ನೀವು ಪಟ್ಟಿ ತೆಗೆದುಕೊಂಡು ಹೋಗಿದ್ದೀರಿ ಎಂದು ಕೇಳಿದಾಗ, “ನಾನು ಎಷ್ಟು ಪಟ್ಟಿ ತೆಗೆದುಕೊಂಡು ಹೋಗಿದ್ದೆ ಎಂಬುದು ಮುಖ್ಯವಲ್ಲ. ಇದು ನನ್ನ ಪಕ್ಷ ಅಲ್ಲ. ನಮ್ಮ ಹೈಕಮಾಂಡ್ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಚರ್ಚೆ ಮಾಡುತ್ತಾರೆ. ನಾವು ಕೇವಲ ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾಪ ಮಾಡುತ್ತೇವೆ ಅಷ್ಟೇ. ನಮ್ಮ ಪಕ್ಷದ ಸಿಇಸಿ ಸಮಿತಿ ಸದಸ್ಯರು ಅವರದೇ ಆದ ಮೂಲಗಳಿಂದ ಮಾಹಿತಿ ಪಡೆದುಕೊಂಡಿರುತ್ತಾರೆ. ಇವರೆಲ್ಲ ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.
ಈಗ ಪ್ರಕಟವಾಗಿರುವ 7 ಕ್ಷೇತ್ರಗಳ ಪೈಕಿ ಎಷ್ಟರಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಕೇಳಿದಾಗ, “ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ” ಎಂದು ತಿಳಿಸಿದರು.