ಬೆಳಗಾವಿ :
ಅಣುಕು ನ್ಯಾಯಾಲಯದಂತಹ ಸ್ಪರ್ಧೆಗಳು ಕಾನೂನು ಮತ್ತು ವಿಜ್ಞಾನದ ನಡುವೆ ಸೇತುವೆ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತವೆ. ಇಂತಹ ಸ್ಪರ್ಧೆಗಳು ಬಾರ್ನ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಕಾನೂನು ಶಿಕ್ಷಣದ ಅನಿವಾರ್ಯ ಭಾಗವಾಗಿದೆ. ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನಿಲ್ ಬಿ. ಕಟ್ಟಿ ಅಭಿಪ್ರಾಯ ಪಟ್ಟರು. ನಗರದ ಕೆ. ಎಲ್. ಎಸ್ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಕೆ. ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಕೆ. ಎಲ್.ಎಸ್ ಸೊಸೈಟಿಯ ಕಾರ್ಯದರ್ಶಿ ವಿ. ಜಿ. ಕುಲಕರ್ಣಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಎಂ. ಕೆ ನಂಬಿಯಾರ್ ಅಣುಕು ನ್ಯಾಯಾಲಯ ಸ್ಪರ್ಧೆಯು ದಕ್ಷಿಣ ಭಾರತದಲ್ಲೇ ಅತ್ಯಂತ ಪಾರದರ್ಶಕವಾಗಿ ನಡೆಯುವ ಉತ್ಕೃಷ್ಟ ಸ್ಪರ್ಧೆಯಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಎ. ಎಚ್ ಹವಲ್ದಾರ್ ಆರ್. ಎಲ್ ಕಾನೂನು ಮಹಾವಿದ್ಯಾಲಯ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸರ್ವಾಂಗೀಣ ಸಮಗ್ರತೆಯನ್ನು ಕಾಯ್ದುಕೊಂಡಿದೆ ಎಂದು ಸಭಿಕರಿಗೆ ಕಾಲೇಜನ್ನು ಪರಿಚಯಿಸಿದರು. ಸ್ಪರ್ಧೆಯ ಸಂಯೋಜಕಿ ಪ್ರೊ. ಅಶ್ವಿನಿ ಪರಬ್ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ನಿಯಮಗಳನ್ನು ವಿವರಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕೇದಾರ್ ಗೋಡ್ಸೆ ಹಾಗೂ ತನ್ವಿ ನಿರೂಪಿಸಿ, ಪೂಜಾ ವಂದಿಸಿದರು. ಕಾಲೇಜಿನ ಮೂಟ್ ಸೊಸೈಟಿಯ ಅಧ್ಯಕ್ಷೆ ಪ್ರೊ. ಅಶ್ವಿನಿ ಪರಬ್, ವಿದ್ಯಾರ್ಥಿ ಕಾರ್ಯದರ್ಶಿ ಕು. ಶ್ರುತಿ ಕೊಳಕಿ ಹಾಗೂ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು