101 ವರ್ಷಗಳ ಹಳೆಯ ನಿಪ್ಪಾಣಿಯ ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಇದೀಗ ಬೆಳಗಾವಿ ಪೊಲೀಸ್ ಅಲರ್ಟ್ ಆಗಿದ್ದಾರೆ. ನಿಪ್ಪಾಣಿಯ ಈ ರಾಮ ಮಂದಿರವನ್ನು ಸ್ಫೋಟಿಸುವುದಾಗಿ 2 ಬೆದರಿಕೆ ಪತ್ರ ಬರೆಯಲಾಗಿದೆ. ಎರಡೂ ಹಿಂದಿ ಭಾಷೆಯಲ್ಲಿದ್ದು, ಒಂದು ಫೆ.7ರಂದು ರಾಮ ಮಂದಿರದ ಗರ್ಭಗುಡಿಯಲ್ಲಿ ಸಿಕ್ಕಿದ್ದರೆ, ಮತ್ತೊಂದು ಹನುಮಂತ ದೇಗುಲದಲ್ಲಿ ಫೆ. 28ರಂದು ಪತ್ತೆಯಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಯೋಧ್ಯೆಯ ರಾಮ ಮಂದಿರವನ್ನು ಮೋದಿ ಜ.22ರಂದು ಉದ್ಘಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಬೆಳಗಾವಿ :ನಿಪ್ಪಾಣಿ ಪಟ್ಟಣದ ಶ್ರೀರಾಮ ಮಂದಿರವನ್ನು ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎಂದು ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ಕಿಡಿಗೇಡಿಗಳು ಬೆದರಿಕೆ ಪತ್ರ ಬರೆದಿದ್ದಾರೆ.
ಕಳೆದ ತಿಂಗಳು ಫೆಬ್ರವರಿ 7 ಹಾಗೂ 28 ರಂದು ಎರಡು ಪತ್ರಗಳು ಬಂದಿದ್ದು, ಮುಂದಿನ 20, 21 ತಾರೀಖಿನ ಒಳಗಡೆ ರಾಮ ಮಂದಿರವನ್ನು ದೊಡ್ಡ ಪ್ರಮಾಣದಿಂದ ಸ್ಪೋಟಿಸುತ್ತೇವೆ ಎಂದು ಅನಾಮಧೇಯ ವ್ಯಕ್ತಿಗಳು ಪತ್ರ ಬರೆದಿದ್ದಾರೆ. ದುಷ್ಕರ್ಮಿಗಳ ಪತ್ರ ಸದ್ಯ ಸಂಚಲನ ಸೃಷ್ಟಿಸಿದೆ.
ಶ್ರೀರಾಮ ಮಂದಿರ 101 ವರ್ಷಗಳ ಇತಿಹಾಸ ಹೊಂದಿದೆ. ಮೊದಲನೆಯ ಪತ್ರ ರಾಮ ಮಂದಿರ ಗರ್ಭ ಗುಡಿಯಲ್ಲಿ ಪತ್ತೆಯಾಗಿದೆ. ಎರಡನೇ ಪತ್ರ ಮಂದಿರದ ಆವರಣದ ಹನುಮಾನ ಮಂದಿರದಲ್ಲಿ ಪತ್ತೆಯಾಗಿವೆ. ಬೆದರಿಕೆ ಪತ್ರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೋಲಿಸ್ ಹೈ ಅಲರ್ಟ್ ಆಗಿದ್ದು, ಮಂದಿರದ ಆವರಣದಲ್ಲಿ 14 ಸಿಸಿಟಿವಿಗಳನ್ನು ಅಳವಡಿಸಿಲಾಗಿದೆ. ಒಂದು ಡಿಆರ್ ಪೋಲಿಸ್ ತುಕಡಿಯನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ.
ನಿಪ್ಪಾಣಿ ಹಳೆ ಪಿಬಿ ರಸ್ತೆಯ ರಾಮಮಂದಿರ ಇದಾಗಿದ್ದು, ಪತ್ರವನ್ನು ಗಮನಿಸಿದ ದೇವಸ್ಥಾನದ ಅರ್ಚಕರ ಮೂಲಕ ನಿಪ್ಪಾಣಿ ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ದೇವಸ್ಥಾನದ ಅರ್ಚಕ ಸುರೇಶ ಜೀವಾಜಿ ದೇಶಪಾಂಡೆ ಅವರು ಮೊದಲು ಪತ್ರವನ್ನು ನೋಡಿ ದೇವಸ್ಥಾನದ ಆಡಳಿತ ಮಂಡಳಿಗೆ ಮೊದಲು ಮಾಹಿತಿ ನೀಡಿದ್ದರು.ಅಲ್ಲಿ ಚರ್ಚೆಯಾಗಿ ನಿಪ್ಪಾಣಿ ನಗರ ಠಾಣೆಗೆ ದೂರು ನೀಡಲಾಗಿದೆ.
ಪತ್ರದ ಆರಂಭದಲ್ಲೇ ಅಲ್ಲಾ ಹೋ ಅಕ್ಬರ್ ಎಂದು ಬರೆಯಲಾಗಿದೆ. ಹೀಗಾಗಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.