ದೆಹಲಿ : ಮಾರ್ಚ್ 15ರೊಳಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕೆಲವೇ ವಾರಗಳು ಬಾಕಿ ಇದ್ದು, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಶನಿವಾರ (ಮಾರ್ಚ್ 9) ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಅರುಣ್ ಗೋಯೆಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಫೆಬ್ರವರಿ 14ರಂದು ಮತ್ತೊಬ್ಬ ಆಯುಕ್ತ ಅನೂಪ್ ಚಂದ್ರ ಪಾಂಡೆ ರಾಜೀನಾಮೆ ನೀಡಿದ್ದರು. ಹೀಗಾಗಿ ಖಾಲಿ ಹುದ್ದೆಗಳನ್ನು ತುಂಬಲು ಮಾರ್ಚ್ 15ರೊಳಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸುವ ಕೆಲವೇ ದಿನಗಳ ಮೊದಲು, ಗೋಯೆಲ್ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ. ಈಗ ಚುನಾವಣಾ ಆಯೋಗದಲ್ಲಿ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಒಬ್ಬರೇ ಇದ್ದಾರೆ.
ಆಯ್ಕೆ ಹೇಗೆ ?
ಗೃಹ ಕಾರ್ಯದರ್ಶಿ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿಯನ್ನು ಒಳಗೊಂಡ, ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ನೇತೃತ್ವದ ಶೋಧನಾ ಸಮಿತಿ ಎರಡು ಹುದ್ದೆಗಳಿಗೆ ಐವರ ಹೆಸರುಗಳನ್ನು ಆಯ್ಕೆ ಸಮಿತಿಗೆ ಶಿಫಾರಸು ಮಾಡುತ್ತದೆ. ನಂತರ ಪ್ರಧಾನಿ, ಕೇಂದ್ರ ಸಚಿವ ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಚುನಾವಣಾ ಆಯುಕ್ತರಾಗಿ ಇಬ್ಬರನ್ನು ಅಂತಿಮಗೊಳಿಸುತ್ತದೆ. ಕೊನೆಗೆ ರಾಷ್ಟ್ರಪತಿ ಚುನಾವಣಾ ಆಯುಕ್ತರನ್ನು ನೇಮಕ ಮಾಡಿಕೊಳ್ಳುತ್ತಾರೆ.
ಸದಸ್ಯರ ಅನುಕೂಲಕ್ಕೆ ಅನುಗುಣವಾಗಿ ಆಯ್ಕೆ ಸಮಿತಿಯು ಮಾರ್ಚ್ 13 ಅಥವಾ 14ರಂದು ಸಭೆ ಸೇರಲಿದ್ದು, ಮಾರ್ಚ್ 15ರೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತ (ಇಸಿ)ರ ನೇಮಕಾತಿಗೆ ಸಂಬಂಧಿಸಿದ ಹೊಸ ಕಾನೂನು ಜಾರಿಗೆ ಬರುವ ಮೊದಲು, ಚುನಾವಣಾ ಆಯುಕ್ತರನ್ನು ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ನೇಮಿಸುತ್ತಿದ್ದರು. ಸಂಪ್ರದಾಯದ ಪ್ರಕಾರ ಹಿರಿಯರು ಸಿಇಸಿಯಾಗುತ್ತಿದ್ದರು.