ಚಿಂತಾಮಣಿ :
ಕೇಂದ್ರದ ಆರ್ಥಿಕ ನೀತಿಯಿಂದ ವಿಪರೀತ ಬೆಲೆ ಏರಿಕೆ ಆಯ್ತು. ಇದರಿಂದ ಉಂಟಾದ ಜನರ ಸಂಕಷ್ಟ ಕಡಿಮೆ ಮಾಡಲು ನಾವು ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ.
ಜನರ ಜೇಬಿಗೆ, ಖಾತೆಗಳಿಗೆ ನೇರವಾಗಿ ಹಣ ಹಾಕಿ ನಮ್ಮ ನಾಡಿನ ಜನರ, ಅವರ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದೆವು: ಸಿ.ಎಂ. ಸಿದ್ದರಾಮಯ್ಯ ವಿವರಿಸಿದರು.
ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟ ಬಿಜೆಪಿಯವರೇ ನಾಡಿನ ಜನರ ಎದುರು ಮೂರ್ಖರಾಗಿದ್ದಾರೆ. ಒಂದೂ ಗ್ಯಾರಂಟಿ ಯೋಜನೆ ಜಾರಿ ಆಗಲು ಸಾಧ್ಯವೇ ಇಲ್ಲ ಎಂದು ಜನರನ್ನು ಬಕ್ರಾ ಮಾಡಲು ಹೋದರು. ನಾವು ಐದೂ ಗ್ಯಾರಂಟಿಗಳನ್ನು ಕೇವಲ ಎಂಟು ತಿಂಗಳಲ್ಲಿ ಜಾರಿ ಮಾಡಿದೆವು. ಈಗ ನಾಡಿನ ಜನರ ಎದುರು ಬಿಜೆಪಿಯವರು ಪರಮ ಮೂರ್ಖರಾಗಿದ್ದಾರೆ ಎಂದರು.
ಮೋದಿ ಅವರ ಸುಳ್ಳುಗಳಿಗೆ ಮಿತಿಯೇ ಇಲ್ಲ. ವಿದೇಶದಿಂದ ಕಪ್ಪು ಹಣ ತಂದು ಭಾರತೀಯರ ಖಾತೆಗೆ 15 ಲಕ್ಷ ರೂ ನೀಡುತ್ತೇವೆ ಎಂದರು. ಒಬ್ಬೇ ಒಬ್ಬ ಭಾರತೀಯನ ಖಾತೆಗೆ 15 ಲಕ್ಷ ಇರಲಿ, 15 ರೂಪಾಯಿ ಆದರೂ ಹಾಕಿದ್ರಾ ಮೋದಿಯವರೇ?
ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದಿದ್ದ ಮೋದಿಯವರು ಇದನ್ನು ಮಾಡಿದ್ರಾ ? ರೈತರ ಖರ್ಚು ಮೂರು ಪಟ್ಟು ಆಗಿದೆ. ಇದೇ ನಿಮ್ಮ ಅಚ್ಛೆ ದಿನವಾ ಎಂದು ಸಿಎಂ ಪ್ರಶ್ನಿಸಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದಿದ್ದ ಮೋದಿಯವರು ಮಾಡಿದ್ರಾ ? ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು . ಮೋದಿಯವರು ಮಾಡಿದ್ರಾ ? ಎಂದು ಪ್ರಶ್ನಿಸಿದರು.
ನಾವು ಐದು ಗ್ಯಾರಂಟಿ ಘೋಷಣೆ ಮಾಡಿ, ಎಂಟೇ ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿ ಜಾರಿ ಮಾಡಿ ಪ್ರತೀ ದಿನ, ಪ್ರತೀ ತಿಂಗಳು ನಾಡಿನ ಜನ ಇದರ ಫಲ ಬಳಸುತ್ತಿದ್ದಾರೆ. ನಾಡಿನ ಜನರ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತಿದೆ. ಇದೇ ನಮಗೂ, ಮೋದಿಯವರಿಗೂ ಇವರು ವ್ಯತ್ಯಾಸ ಎಂದು ವಿವರಿಸಿದರು.
*ನೀವೂ ಸೇರಿ 7 ಕೋಟಿ ಕನ್ನಡಿಗರಿಗೆ ದ್ರೋಹ ಎಸಗಿದ ಬಿಜೆಪಿ ಪಕ್ಷ ಮತ್ತು ಬಿಜೆಪಿ ಸಂಸದರಿಗೆ ಕ್ಷಮಿಸಬೇಡಿ*
ನೀವೂ ಸೇರಿ 7 ಕೋಟಿ ಕನ್ನಡಿಗರಿಗೆ ದ್ರೋಹ ಎಸಗಿದ ಬಿಜೆಪಿ ಪಕ್ಷ ಮತ್ತು ಬಿಜೆಪಿ ಸಂಸದರಿಗೆ ಕ್ಷಮಿಸಬೇಡಿ. ನಾವು ಕೇಂದ್ರಕ್ಕೆ ಕೊಡುವ ಪ್ರತಿ 100 ರೂಪಾಯಿಯಲ್ಲಿ ರಾಜ್ಯಕ್ಕೆ ವಾಪಾಸ್ ಕೊಡುತ್ತಿರುವುದು ಕೇವಲ 13 ರೂ. ಈ ಭೀಕರ ಅನ್ಯಾಯವನ್ನು ರಾಜ್ಯದಿಂದ ಆರಿಸಿ ಹೋದ ಸಂಸದರು ಇವತ್ತಿನವರೆಗೂ ಪ್ರಶ್ನಿಸಿಲ್ಲ. ಈ ಸಂದರನ್ನು ಕ್ಷಮಿಸಬೇಡಿ ಎಂದು ಸಿಎಂ ಮನವಿ ಮಾಡಿದರು.
*”ಸೆಕ್ಯುಲರ್” ಹೆಸರು ಕಿತ್ತಾಕಿ ದೇವೇಗೌಡರೇ*
ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ, ಮುಂದಿನ ಜನ್ಮದಲ್ಲಿ ಮುಸ್ಲೀಮನಾಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜತೆ ಸೇರಿ ಪ್ಲೇಟ್ ಚೇಂಜ್ ಮಾಡಿದ್ದಾರೆ. “ತಮಗೂ ಮೋದಿಯವರಿಗೂ ನಡುವೆ ಅವಿನಾಭಾವ ಸಂಬಂಧ ಇದೆ” ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಸಿಎಂ, ದೇವೇಗೌಡರು ತಮ್ಮ ಪಕ್ಷದ ಹೆಸರಿನಲ್ಲಿರುವ “ಸೆಕ್ಯುಲರ್” ಪದ ಕಿತ್ತಾಕಿದರೆ ಒಳ್ಳೆಯದು ಎಂದರು.
*ಸಜ್ಜನ ಡಾ.ಎಂ.ಸಿ.ಸುಧಾಕರ್ ಗೆ ಉತ್ತಮ ರಾಜಕೀಯ ಭವಿಷ್ಯ ಇದೆ*
ಚಿಂತಾಮಣಿ ಜನತೆ ಅಭಿವೃದ್ಧಿಯ ದೂರದೃಷ್ಟಿ ಇರುವ ಜನಪರ ಕಾಳಜಿಯ ಎಂ.ಸಿ.ಸುಧಾಕರ್ ಅವರನ್ನು ಗೆಲ್ಲಿಸಿ ಉತ್ತಮ ಕೆಲಸ ಮಾಡಿದ್ದಾರೆ. ಸುಧಾಕರ್ ಅವರಿಗೆ ಮುಂದೆ ಇನ್ನೂ ಉತ್ತಮ ರಾಜಕೀಯ ಭವಿಷ್ಯ ಇದೆ ಎಂದು ಇದೇ ಸಂದರ್ಭದಲ್ಲಿ ಸಿ.ಎಂ ಭರವಸೆ ನೀಡಿದರು.
*ಚಿಂತಾಮಣಿಯ ಜನರ ಜೇಬಿಗೆ / ಖಾತೆಗೆ ಜಮೆ ಆದ ಹಣದ ವಿವರ*
ಗ್ಯಾರಂಟಿಗಳ ಮೂಲಕ ಕಡುಕಷ್ಟದಲ್ಲಿರುವ ಜನರಿಗೆ ಹಣ ಉಳಿತಾಯವಾಗಿ ಅವರ ಜೀವನಮಟ್ಟ ಸುಧಾರಣೆಯಾಗಲು ಕಾರಣವಾಗಿದೆ ಎನ್ನುವುದು ನಮ್ಮ ಸರ್ಕಾರಕ್ಕೆ ಅತ್ಯಂತ ತೃಪ್ತಿಕರ ಸಂಗತಿಯಾಗಿದೆ ಎಂದು ಸಿಎಂ ಎಂದರು.
ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿದ ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ 1.02 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿರುವುದು, ಯೋಜನೆಗೆ ಮಹಿಳೆಯರ ಮಾನ್ಯತೆ ದೊರೆತಿರುವುದಕ್ಕೆ ಸಾಕ್ಷಿ.
ಶಕ್ತಿ ಯೋಜನೆಯಡಿ, 2023ರ ಜೂನ್ ಮಾಹೆಯಿಂದ ಈವರೆಗೆ 2.79 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯ ಪಡೆದಿದ್ದು, ಇದಕ್ಕಾಗಿ 96.77 ಕೋಟಿ ರೂ.ಗಳ ವೆಚ್ಚವಾಗಿದೆ.
ಚಿಂತಾಮಣಿ ತಾಲ್ಲೂಕಿನಲ್ಲಿ 58.24 ಲಕ್ಷ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣಕ್ಕೆ ಸರ್ಕಾರ 23.04 ಕೋಟಿ ರೂ.ಗಳನ್ನು ಭರಿಸಿದೆ.
ಗೃಹಜ್ಯೋತಿ ಯೋಜನೆಯಡಿ ಈವರೆಗೆ 3,09,030 ಫಲಾನುಭವಿಗಳು (ಶೇ. 93 ರಷ್ಟು ಗ್ರಾಹಕರು) ನೋಂದಣಿಯಾಗಿದ್ದು, ಆಗಸ್ಟ್-2023 ಮಾಹೆಯಿಂದ ಫೆಬ್ರವರಿ-2024ರ ಮಾಹೆಯ ಅಂತ್ಯದವರೆಗೆ ಒಟ್ಟು 7,559 ಲಕ್ಷಗಳ ವೆಚ್ಚವಾಗಿದೆ. ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 55,675 ಫಲಾನುವಿಗಳು ನೋಂದಣಿಯಾಗಿದ್ದು, 1,526 ಲಕ್ಷಗಳ ರಿಯಾಯಿತಿ ನೀಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಜುಲೈ 2023ರಿಂದ ಈವರೆಗೆ ಡಿ.ಬಿ.ಟಿ ಮುಖಾಂತರ 85.97 ಕೋಟಿ ನೇರ ನಗದು ವರ್ಗಾಯಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 93.05 ರಷ್ಟು ಪಡಿತರ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿವೆ. ಚಿಂತಾಮಣಿ ತಾಲ್ಲೂಕಿನಲ್ಲಿ 64,827 ಪಡಿತರ ಕುಟುಂಬಗಳ 2,20,681 ಫಲಾನುಭವಿಗಳಿಗೆ ಪಡಿತರ ಮತ್ತು ನೇರ ನಗದು ಹಣವನ್ನು ವರ್ಗಾಯಿಸಲಾಗಿದೆ.
ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆಯಿಟ್ಟ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೆ 2,99,152 ಅರ್ಜಿದಾರರು ನೋಂದಣಿಯಾಗಿದ್ದು, ಈ ಪೈಕಿ 2,75,330 ಮಹಿಳಾ ಫಲಾನುಭವಿಗಳಿಗೆ ಈವರೆಗೆ 304.12 ಕೋಟಿ ಹಣ ವರ್ಗಾವಣೆಯಾಗಿದೆ.
ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 66,000 ಮಹಿಳೆಯರು ನೋಂದಣಿಯಾಗಿದ್ದು, 80 ಕೋಟಿ ಹಣ ಅವರ ಖಾತೆಗೆ ಜಮೆಯಾಗಿದೆ.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2,527 ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 347 ಅರ್ಜಿದಾರರಿಗೆ ಪ್ರತಿ ಮಾಹೆಯಾನ 3000 ರೂಗಳಂತೆ ಯುವನಿಧಿ ಭತ್ಯೆಯನ್ನು ಪಾವತಿಸಲಾಗಿರುತ್ತದೆ. ಈವರೆಗೆ ಜನವರಿ ಮತ್ತು ಫೆಬ್ರವರಿ ಮಾಹೆಯ ಭತ್ಯೆಯ ಮೊತ್ತ ಒಟ್ಟು 11,85,000 ರೂಗಳನ್ನು 2024ರ ಫೆಬ್ರವರಿ ಅಂತ್ಯದವರೆಗೆ ಪಾವತಿಸಲಾಗಿದೆ. ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 103 ಮಂದಿ ಅರ್ಜಿದಾರರಿಗೆ 6.18 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ.
ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಬದುಕನ್ನು ಆರ್ಥಿಕವಾಗಿ ಸುಭದ್ರಗೊಳಿಸುವ ಜೊತೆಗೆ ರಾಜ್ಯದ ಅಭಿವೃದ್ದೀಯೂ ನಮ್ಮ ಸರ್ಕಾರದ ಆದ್ಯತೆ ಆಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿರುವ ಸರ್ಕಾರ ಇಂದು ಒಂದೇ ದಿನ ಸುಮಾರು 431.35 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 75208 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಸದರಿ ಬೆಳೆಗಳಿಗೆ ಸರ್ಕಾರದಿಂದ ಮೊದಲ ಹಂತದಲ್ಲಿ 97,134 ರೈತರಿಗೆ ಇಂದಿನವರೆಗೆ 17.68 ಕೋಟಿ ರೂ.ಗಳನ್ನು ಬರ ಪರಿಹಾರ ಹಣವನ್ನು ಪಾವತಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಒಂದು ಮತ್ತು ಎರಡನೇ ಹಂತದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ , ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್,
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಸದಸ್ಯ ನಸೀರ್ ಅಹಮದ್,
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಪಿ.ಎ. ಪ್ರದೀಪ್ ಈಶ್ವರ್, ಬಿ.ಎನ್. ರವಿಕುಮಾರ್, ಕೆ. ಹೆಚ್. ಪುಟ್ಟಸ್ವಾಮಿಗೌಡ, ಕೆ.ವೈ. ನಂಜೇಗೌಡ,
ವಿಧಾನ ಪರಿಷತ್ತಿನ ಸದಸ್ಯರಾದ: ಡಾ.ವೈ.ಎ. ನಾರಾಯಣಸ್ವಾಮಿ, ಚಿದಾನಂದ ಎಂ. ಗೌಡ, ಎಂ.ಎಲ್. ಅನಿಲ್ ಕುಮಾರ್,
ಉಪಸ್ಥಿತರಿದ್ದರು.