ಬೆಳಗಾವಿ : ಬೆಳಗಾವಿ ಬಿಜೆಪಿಯ ಭದ್ರಕೋಟೆಯಾಗಿ ಕಳೆದ ಎರಡು ದಶಕಗಳಿಂದ ಹೊರಹೊಮ್ಮಿದೆ. ಆದರೆ ಇದೇ ಮೊದಲ ಬಾರಿಗೆ ಬಿಜೆಪಿ ಪಾಲಿಗೆ ಬೆಳಗಾವಿಯಲ್ಲಿ ಗೆಲುವು ಹರಸಾಹಸವಾಗಿ ಪರಿಣಮಿಸಿದೆ. ಕೊನೆಗೂ ಬಿಜೆಪಿ ತೂಗಿ ಅಳೆದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಆದರೆ ಬೆಳಗಾವಿ ಬಿಜೆಪಿ ಪಾಲಿಗೆ ಭದ್ರ ಕೋಟೆಯಾಗಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭದ್ರಕೋಟೆ ಛಿದ್ರಗೊಂಡಿತು. ಹೀಗಾಗಿ ಈ ಬಾರಿ ಬಿಜೆಪಿ ಪಾಲಿಗೆ ಬೆಳಗಾವಿ ಗೆಲುವು ಕಗ್ಗಂಟಾಗಿದೆ. ಅದರಲ್ಲೂ ಸ್ಥಳೀಯ ಬಿಜೆಪಿಗರು ಜಗದೀಶ್ ಶೆಟ್ಟರ್ ಅವರ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ ಹೈಕಮಾಂಡ್ ಇದೆಲ್ಲವನ್ನು ಬದಿಗಿಟ್ಟು ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿಯಲ್ಲಿ ಟಿಕೆಟ್ ನೀಡಿರುವುದು ಗಮನ ಸೆಳೆದಿದೆ. ಚುನಾವಣೆಯಲ್ಲಿ ಬೆಳಗಾವಿ ಬಿಜೆಪಿ ನಾಯಕರು ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಟೊಂಕ ಕಟ್ಟಿ ನಿಲ್ಲುತ್ತಾರಾ ಎಂಬ ದೊಡ್ಡ ಪ್ರಶ್ನೆ ಇದೀಗ ಜನರಲ್ಲಿ ಮೂಡಿದೆ.
ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಬೆಳಗಾವಿ ಗೆಲುವು ಬಹುದೊಡ್ಡ ಕಠಿಣ ಸವಾಲಾಗಿದ್ದು ಇದನ್ನು ಯಾವ ರೀತಿ ನಿಭಾಯಿಸಿ ಅವರು ಗೆಲುವು ಸಾಧಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಒಟ್ಟಾರೆ ಸೋಮವಾರದಿಂದಲೇ ಬೆಳಗಾವಿಯ ರಣಕಣ ಕಾವೇರಲಿದ್ದು ಜಗದೀಶ್ ಶೆಟ್ಟರ್ ಅವರಿಗೆ ಕೊನೆಗೂ ಟಿಕೆಟ್ ಸಿಕ್ಕಿರುವುದರಿಂದ ಕಮಲ ಪಾಳಯ ಸೋಮವಾರದಿಂದ ಬಿರುಸಿನ ಚುನಾವಣಾ ಪ್ರಚಾರ ನಡೆಸುವುದು ಖಚಿತವಾಗಿದೆ.