ಬೆಳಗಾವಿ – ಇಲ್ಲಿನ ರಂಗಸೃಷ್ಟಿ ರಂಗತಂಡವು ಏ.7ರಂದು ನೆಹರೂ ನಗರದಲ್ಲಿರುವ ಕನ್ನಡ ಭವನದಲ್ಲಿ ವಿಶ್ವರಂಗ ದಿನಾಚರಣೆಯ ನಿಮಿತ್ತ ನಾಟಕ ಪ್ರದರ್ಶನ ಹಾಗೂ ರಂಗಸಮ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಇತ್ತೀಚೆಗೆ ಕನ್ನಡಸಾಹಿತ್ಯಭವನದಲ್ಲಿ ರಂಗಸೃಷ್ಟಿ ತಂಡದ ಕಾರ್ಯಕಾರಿ ಮಂಡಳಿಯ ಹಾಗೂ ಕಲಾವಿದರ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

2024ನೆಯ ಸಾಲಿನ ರಂಗಸೃಷ್ಟಿ ಸಂಮಾನಕ್ಕಾಗಿ ಸವದತ್ತಿಯ ರಂಗಕರ್ಮಿ,ನಿರ್ದೇಶಕ, ನಾಟಕಕಾರ ಝಕೀರ ನದಾಫ ಇವರನ್ನು ಆಯ್ಕೆ ಮಾಡಲಾಗಿದೆ. ೧೯೮೭ರಿಂದ ಇಲ್ಲಿಯವರೆಗೆ ಅವರು ಮಾಡಿದರುವ ರಂಗಸಾಧನೆಯನ್ನು ಪರಿಗಣಿಸಿ ಅವರನ್ನು 2024ರ ರಂಗಸಂಮಾನಕ್ಕೆ ಆಯ್ಕೆ ಮಾಡಲಾಗಿದೆ.

ಈ ರಂಗಸಂಮಾನವನ್ನು ದಿನಾಂಕ ಏ.7ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ರಂಗಸೃಷ್ಟಿ ತಂಡದ ಕಲಾವಿದರಿಂದ ಈಸಕ್ಕಿಯ ಆಸೆ ನಾಟಕವನ್ನು ಪ್ರದರ್ಶಿಸಲು ಸಹ ನಿರ್ದರಿಸಲಾಯಿತು.
ಈ ನಾಟಕವನ್ನು ಕನ್ನಡದ ಖ್ಯಾತ ರಂಗತಜ್ಞ ಡಾ.ರಾಮಕೃಷ್ಣ ಮರಾಠೆಯವರಯ ರಚಿಸಿದ್ದು, ಶಿರೀಷ ಜೋಶಿ ನಿರ್ದೇಶಿಸಿದ್ದಾರೆ. ಶಾಂತಾ ಆಚಾರ್ಯ ಅವರ ನೃತ್ಯ ಸಂಯೋಜನೆ, ಶರಣಗೌಡ ಪಾಟೀಲ ಅವರ ರಂಗವಿನ್ಯಾಸ ಹಾಗೂ ಮಂಜುಳಾ ಜೋಶಿಯವರ ಸಂಗೀತ ನಿರ್ದೇಶನದಲ್ಲಿ ಈ ನಾಟಕ ಮೂಡಿಬರಲಿದೆ. ಬಸವರಾಜ ಗಾರ್ಗಿ, ಶರಣಯ್ಯ ಮಠಪತಿ, ಶ್ರೈಲಜಾ ಭಿಂಗೆ, ಶಾರದಾ ಭೋಜ, ಶ್ರದ್ಧಾ ಪಾಟೀಲ, ರಾಜಕುಮಾರ ಕುಂಬಾರ, ವಿಶ್ವನಾಥ ದೇಸಾಯಿ, ಜಯಶ್ರೀ ಕ್ಷೀರಸಾಗರ, ಜ್ಯೋತಿ ಅಶ್ವತ್ಥಪುರ ಮುಂತಾದವರು ಅಭಿನಯಿಸಿದ ಈ ನಾಟಕಕ್ಕೆ ರವಿರಾಜ ಭಟ್ಟ ಮತ್ತು ಶ್ರೀನಾಥ ಜೋಶಿ ನೆರವು ನೀಡಿದ್ದಾರೆ.
ಇವೆರಡೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ್ ಅವರು ವಹಿಸಲಿದ್ದಾರೆ. ಶಾಂತಾ ಆಚಾರ್ಯ ರಂಗಸಂದೇಶ ವಾಚಿಸಲಿದ್ದಾರೆ.
ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ, ಉಪಾಧ್ಯಕ್ಷ ಎಂ.ಕೆ.ಹೆಗಡೆ, ಡಾ.ರಾಮಕೃಷ್ಣ ಮರಾಠೆ ಮತ್ತು ರಂಗಸೃಷ್ಟಿಯ ಇತರ ಪದಾಧಿಕಾರಿಗಳು ಹಾಗೂ ಕಲಾವಿದರು ಸಭೆಯಲ್ಲಿ ಹಾಜರಿದ್ದರು. ಬಸವರಾಜ ಗಾರ್ಗಿ ಸಭೆಗೆ ಎಲ್ಲರನ್ನೂ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.