ಕಲ್ಲೋಳಿ (ಅರಭಾವಿ): ಕಳೆದ ಎರಡು ದಿನಗಳಿಂದ ಅರಭಾವಿ ಕ್ಷೇತ್ರಾದ್ಯಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಿಂಚಿನ ಸಂಚಾರ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ, ಮಗ ಮೃಣಾಲ್‌ ಹೆಬ್ಬಾಳ್ಕರ್ ಪರ ಭರ್ಜರಿ ಪ್ರಚಾರ ನಡೆಸಿದರು‌. ಅರಭಾವಿ ಪಟ್ಟಣ, 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸ್ವಾಭಿಮಾನಿ ಸಮಾವೇಶ ಆಯೋಜಿಸುವ ಮೂಲಕ ಮತ ಬೇಟೆ ನಡೆಸಿದರು.

ಪ್ರಚಾರದ ಎರಡನೇ ದಿನವಾದ ಶನಿವಾರ ಅರಭಾವಿ ಪಟ್ಟಣದಿಂದ ಆರಂಭಗೊಂಡ ಪ್ರಚಾರ ವಡೇರಹಟ್ಡಿ, ನಾಗನೂರ, ತುಕ್ಕಾನಟ್ಟಿ ಹಾಗೂ ಕಲ್ಲೋಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿತು.

*ಮತ ಕೇಳಲು ಶೆಟ್ಟರ್ ಗೆ ನೈತಿಕತೆಯಲ್ಲ*
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿಯಲ್ಲಿ ಮತ ಕೇಳಲು ನೈತಿಕತೆ ಇಲ್ಲ. ಜೀವನದುದ್ದಕ್ಕೂ ಸ್ವಾರ್ಥ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಬೆಳಗಾವಿ ಸ್ವಾಭಿಮಾನಿ ಜನರು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಶೆಟ್ಟರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಬೆಳಗಾವಿ ಜಿಲ್ಲೆಗೆ ಅನ್ಯಾಯ ಎಸಗಿದ್ದಾರೆ. ಅವರು ಮುಖ್ಯಮಂತ್ರಿ ಆದಾಗಲೂ ಬೆಳಗಾವಿ ಅಭಿವೃದ್ಧಿಗೆ ಸ್ಪಂದಿಸಲಿಲ್ಲ. ಇಂಥ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಬೇಕಾ ಎಂದು ಪ್ರಶ್ನಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕೆ ಕೇಂದ್ರ ಸರ್ಕಾರ ಹಗೆ ಸಾಧಿಸುತ್ತಿದೆ. ಕರ್ನಾಟಕ ಸರ್ಕಾರ ಹಣ ಕೊಡುತ್ತೇನೆ ಎಂದು ಹೇಳಿದರೂ ಬಡ ಜನರಿಗೆ ನೀಡಲು ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. ಮಲತಾಯಿ ಧೋರಣೆ ಅನುಸರಿಸಿತು. ಆದರೆ ಹಠಬಿದ್ದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಕ್ಕಿ ಬದಲಿಗೆ ಹಣವನ್ನು ನೀಡುತ್ತಾ ಬಂದಿದ್ದಾರೆ ಎಂದು‌ ಸಚಿವೆ ಹೇಳಿದರು. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬೆಳಗಾವಿ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಹಾಗೂ ಚಿಕ್ಕೋಡಿ ಕ್ಷೇತ್ರದ ಪ್ರಿಯಾಂಕಾ ಜಾರಕಿಹೊಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಅಭ್ಯರ್ಥಿಗಳು ಎಂದು ಹೇಳಿದರು.

*ಅದ್ದೂರಿ ಸ್ವಾಗತ ಕೋರಿದ ಕಾರ್ಯಕರ್ತರು*
ವಡೇರಹಟ್ಡಿ, ತುಕ್ಕಾನಟ್ಟಿ, ಕಲ್ಲೋಳಿಯಲ್ಲಿ ತೆರೆದ ವಾಹನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಮೆರವಣಿ ಮಾಡಿದರು. ವೇಳೆ ನೂರಾರು ಕಾರ್ಯಕರ್ತರು ಹೆಜ್ಜೆ ಹಾಕುವುದರ ಜೊತೆಗೆ ಸಚಿವರಿಗೆ ಜೈ ಕಾರ ಕೂಗಿದರು. ಸಮಾರಂಭದಲ್ಲಿ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಚಿವರಿಗೆ‌ ಹಾಗೂ ಮೃಣಾಲ್‌ ಹೆಬ್ಬಾಳ್ಕರ್ ಅವರಿಗೆ ಸನ್ಮಾನ ಮಾಡಿದರು.

*ಕೇಕ್ ಕಟ್ ಮಾಡಿಸಿದ ಕಾರ್ಯಕರ್ತರು*
ಮೃಣಾಲ್‌ ಹೆಬ್ಬಾಳ್ಕರ್ ಅವರ ಹುಟ್ಟುಹಬ್ಬದ ಅಂಗವಾಗಿ ವೇದಿಕೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಸಮಾವೇಶಕ್ಕೆ ಆಗಮಿದ್ದ ನೂರಾರು ಕಾರ್ಯಕರ್ತರು ಮೃಣಾಲ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಇದೇ ವೇಳೆ ಮಾತಾಡಿದ ಮೃಣಾಲ್‌ ಹೆಬ್ಬಾಳ್ಕರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಸ್ಪರ್ಧಿಸುತ್ತಿದ್ದು, ನಿಮ್ಮ ಮನೆ ಮಗನಾದ ನನಗೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ತುಕ್ಕಾನಟ್ಟಿಯಲ್ಲಿ ಮಾತನಾಡಿದ‌ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯಾದ ಭರಮಣ್ಣ ಉಪ್ಪಾರ್ ಮಾತನಾಡಿ, ಮೃಣಾಲ್‌ ಹೆಬ್ಬಾಳ್ಕರ್ ತಾಯಿಗೆ ತಕ್ಕ ಮಗನಾಗಿದ್ದಾರೆ. ಇವರನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸಿದರೆ ನಮ್ಮ ಮನೆ ಮಗನಾಗಿ ಕೆಲಸ ಮಾಡಲಿದ್ದಾರೆ. ವಿದ್ಯಾವಂತ, ಗುಣವಂತನಾಗಿರುವ ಮೃಣಾಲ್‌ ಅವರಿಗೆ ಅರಭಾವಿ ಕ್ಷೇತ್ರದಲ್ಲಿ ಉತ್ತಮ ಮುನ್ನಡೆ ಸಿಗುವುದು ಗ್ಯಾರಂಟಿ ಎಂದರು. ಸ್ಥಳೀಯ ಅಭ್ಯರ್ಥಿಗೆ ಮತ ನೀಡಿ, ನಮ್ಮ ಮನೆ ಮಗನನ್ನು ಸಂಸತ್ ಸದಸ್ಯನಾಗಿ ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.

ತುಕ್ಕಾನಟ್ಟಿ ಗ್ರಾಮದ ಮುಖಂಡರಾದ ಗಂಗಾಧರ್ ಬಡಕುಂದ್ರಿ ಮಾತಾಡಿ, ಇದು ನಮ್ಮ ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆ. ನಮ್ಮ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸಬೇಕು ಎಂದರು. ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಕಳೆದ ವರ್ಷ ಕಾಂಗ್ರೆಸ್ ಪಕ್ಷಕ್ಕೆ ಬಂದರು, ವಿಧಾನಸಭೆಯಲ್ಲಿ ಸೋತರೂ ಕಾಂಗ್ರೆಸ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡಿತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿ ಇದೀಗ ಮತ್ತೆ ಬಿಜೆಪಿಗೆ ವಾಪಸ್ ಹೋಗಿ, ಬೆಳಗಾವಿಗೆ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಇವರಿಗೆ ಸ್ವಾಭಿಮಾನಿ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಮುಖಂಡರಾದ ಭೀಮಪ್ಪ ಹಂದಿಗುಂದ್, ಅನಿಲ್ ಕುಮಾರ್ ದಳವಾಯಿ, ಭೀಮಪ್ಪ ಹಂದಿಗುಂದ್, ಭರಮಣ್ಣ ಉಪ್ಪಾರ್, ಸುಭಾಷ್ ಪೂಜಾರಿ, ರಮೇಶ್ ಉಟಗಿ, ಲಗಮನ್ನ ಕಳಸನ್ನವರ್, ಪ್ರಕಾಶ್ ಅರಳಿ ದಿನವಿಡಿ ಪ್ರಚಾರಕ್ಕೆ ಸಾಥ್ ನೀಡಿದರು.