ಬೆಂಗಳೂರು : ಲೋಕಸಭಾ ಚುನಾವಣೆ ಕಾವೇರುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರವಾಗಿ ಏಪ್ರಿಲ್ 14ರಿಂದ ಭರ್ಜರಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಕರ್ನಾಟಕ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲೆಲ್ಲಿ ಪ್ರಚಾರ ಸಭೆ ಆಯೋಜಿಸಬೇಕು, ಹೇಗೆ ನಡೆಸಬೇಕು ಎಂಬ ಬಗ್ಗೆ ಕಾರ್ಯತಂತ್ರ ಹೆಣೆಯಲಾಗುತ್ತಿದೆ. ಈಗಾಗಲೇ ಕಲಬುರ್ಗಿ ಮತ್ತು ಶಿವಮೊಗ್ಗದಲ್ಲಿ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜನ್ಮದಿನವಾಗಿರುವ ಏಪ್ರಿಲ್ 14ರಂದು ಮತ್ತೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
ರೋಡ್ ಶೋ ಎಲ್ಲಿ ನಡೆಸಬೇಕು ಎಂಬ ಬಗ್ಗೆ ಬಿಜೆಪಿ ನಾಯಕರು ರಣತಂತ್ರ ಹೆಣೆಯುತ್ತಿದ್ದು, ಶೀಘ್ರವೇ ನೀಲ ನಕ್ಷೆ ಸಿದ್ಧಗೊಳ್ಳಲಿದೆ. ರೋಡ್ ಶೋಗಳಲ್ಲಿ ಪ್ರಧಾನಿ ಜೊತೆಗೆ ಸ್ಥಳೀಯ ಅಭ್ಯರ್ಥಿ ಮಾತ್ರ ಇರಲಿದ್ದಾರೆ. ಅಗತ್ಯ ಬಿದ್ದರೆ ಮಾತ್ರ ಇತರ ನಾಯಕರಿಗೆ ಸ್ಥಾನ ಸಿಗುವ ಸಾಧ್ಯತೆ ಬಗ್ಗೆ ಚರ್ಚಿಸಲಾಗಿದೆ. ಪ್ರತಿ ಕಾರ್ಯಕ್ರಮದಲ್ಲೂ ಪ್ರಧಾನಿ ಜೊತೆ ಮಹಿಳೆಯರಿಗೆ ಅವಕಾಶ ಸಿಗುವ ಚಿಂತನೆ ನಡೆದಿದೆ.
ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಚುನಾವಣೆ ಸಂದರ್ಭದಲ್ಲಿ ಆಗಮಿಸುತ್ತಿದ್ದು ಅವರ ಕಾರ್ಯಕ್ರಮಗಳಿಗೆ ಅಭೂತಪೂರ್ವ ರೀತಿಯಲ್ಲಿ ಜನ ಸೇರುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮೋದಿ ಅವರಿಗೆ ಭರ್ಜರಿ ಜನಬೆಂಬಲ ವ್ಯಕ್ತವಾಗುತ್ತಿರುವುದು ವಿಶೇಷ.