ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ರಾಣಿ​ ಚನ್ನಮ್ಮ ಜತೆ ಹೋಲಿಸುವುದು ಸರಿಯಲ್ಲ. ಚನ್ನಮ್ಮ ಗೆ ವಿಶೇಷ ಸ್ಥಾನಮಾನ ಇದೆ, ಬ್ರಿಟಿಷರನ್ನು ಸದೆಬಡಿದವರು ರಾಣಿ ಚನ್ನಮ್ಮ. ಸಚಿವೆಯಾಗಿ ಒಂದು ವರ್ಷವಾದ್ರೂ ಸಮುದಾಯಕ್ಕೆ ಯಾಕೆ ಮೀಸಲಾತಿ ಕೊಡಿಸಲಿಲ್ಲ. ನಿಜವಾದ ಪಂಚಮಸಾಲಿ ಆಗಿದ್ದರೆ ಸಿಎಂಗೆ ಹೇಳಿ ಮಾಡಿಸಿ ಕೊಡುತ್ತಿದ್ದರು. 2ಎ ಮೀಸಲಾತಿ ಕೊಡಿಸಿದ್ರೆ 1 ಕೆಜಿ ಚಿನ್ನಾಭರಣ ನೀಡಿ ಸನ್ಮಾನ ಮಾಡ್ತೀನಿ ಎಂದು ಮುರುಗೇಶ ನಿರಾಣಿ ಹೇಳಿದ್ದಾರೆ.

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪಂಚಮಸಾಲಿ ಸಮಾಜಕ್ಕೆ ಸೇರಿದವರು ಅಲ್ಲ, ಅವರು ಬಣಜಿಗ ಸಮಾಜಕ್ಕೆ ಸೇರಿದವರು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಇದೀಗ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಲೋಕಸಭಾ ಮತಕ್ಷೇತ್ರದವರೆ ಅಲ್ಲ. ಅವರು ಖಾನಾಪುರ ಮತ ಕ್ಷೇತ್ರಕ್ಕೆ ಸಂಬಂಧಪಟ್ಟ ಹಟ್ಟಿಹೊಳಿಯವರು ಎಂದು ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು,
ಮದುವೆ ಆಗುವ ಮೊದಲು ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಸಮಾಜಕ್ಕೆ ಸೇರಿದವರಾಗಿದ್ದರು ಆದರೆ, ಬಣಜಿಗ ಸಮಾಜಕ್ಕೆ ಸೇರಿರುವ ರವೀಂದ್ರ ಹೆಬ್ಬಾಳ್ಕರ್ ಅವರನ್ನು ಮದುವೆ ಆಗುವ ಮೂಲಕ ಪತಿಯ ಅಡ್ರೆಸ್ ಹೊಂದಿದ್ದಾರೆ. ಅವರೀಗ ಪತಿಯ ಜಾತಿಗೆ ಸೇರಿದವರಾಗಿರುತ್ತಾರೆ. ಮದುವೆಯಾದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಎಂದು ಅವರ ಹೆಸರು ಬದಲಾವಣೆ ಆಗಿರುವುದರಿಂದ ಈಗ ಅವರದ್ದು ಬಣಜಿಗ ಸಮಾಜ. ಹೀಗಾಗಿ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಅವರ ಮಗ ಮೃಣಾಲ್ ಹೆಬ್ಬಾಳ್ಕರ್ ಕೂಡ ಬಣಜಿಗರು ಎಂದು ವಾಗ್ದಾಳಿ ನಡೆಸಿದರು.

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಸಂಬಂಧ ನಡೆದ ಹೋರಾಟದ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ನನಗೆ ಸವಾಲು ಹಾಕಿದ್ದರು. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡಿಸಿದರೆ ಬೆಳಗಾವಿ ಕುಂದಾ ಕೊಟ್ಟು ಸನ್ಮಾನ ಮಾಡುತ್ತೇನೆ ಎಂದಿದ್ದರು. ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ಮೂರು ತಿಂಗಳಲ್ಲಿ ಮೀಸಲಾತಿ ಕೊಡಿಸುತ್ತೇನೆ. ನಾನು ಮೀಸಲಾತಿ ಕೊಡಿಸಿದರೆ ಒಂದು ಜೋಡಿ ಚಿನ್ನದ ಬಳೆ ಕೊಟ್ಟು ಸನ್ಮಾನ ಮಾಡಬೇಕು ಎಂದಿದ್ದರು. ಈಗ ನಿಮ್ಮದೇ ಸರಕಾರ ಬಂದಿದೆ. ನೀವು ಸಹಾ ಮಂತ್ರಿಯೂ ಆಗಿದ್ದೀರಿ. ನಿಮ್ಮ ಸರಕಾರ ಅಧಿಕಾರವಹಿಸಿಕೊಂಡು ಒಂದು ವರ್ಷ ಕಳೆದರೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಆಗಿಲ್ಲ. ಸಮಾಜದ ಬಗ್ಗೆ ನಿಮಗೆ ಕಳಕಳಿ ಇದ್ದರೆ ನೀವು ಪಂಚಮಸಾಲಿಕೋಟಾದಲ್ಲಿ ಮಂತ್ರಿ ಆಗಿರುವ ಕಾರಣಕ್ಕೆ ಈಗಲಾದರೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿ ಎಂದು ಅವರು ಸವಾಲು ಹಾಕಿದರು.

ಈಗ ನೀವು ಪಂಚಮಸಾಲಿ ಸಮುದಾಯದ ಕೋಟಾದಲ್ಲಿ ಮಂತ್ರಿ ಆದ ಕಾರಣಕ್ಕೆ ಈ ಸಮಾಜಕ್ಕೆ ಮೀಸಲಾತಿ ಕೊಡಿಸಿ. ಮೀಸಲಾತಿ ಕೊಡಿಸಿದರೆ ನಿಮ್ಮ ಸವಾಲಿನಂತೆ ಒಂದು ಜೋಡಿ ಬಲೆ ಅಲ್ಲ, ಒಂದು ಕೆಜಿ ಬಂಗಾರದ ಆಭರಣ ಮತ್ತು ಕುಂದಾ ಕೊಟ್ಟು ಸಮಾಜದ ಹತ್ತಾರು ಸಾವಿರ ಜನರನ್ನು ಸೇರಿಸಿ ಸನ್ಮಾನ ಮಾಡಿಸುವೆ. ಒಂದು ವೇಳೆ ಮೀಸಲಾತಿ ಕೊಡಿಸಲು ಆಗದೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟದಲ್ಲಿ ಭಾಗಿಯಾಗಿ. ಮೀಸಲಾತಿ ಸಿಕ್ಕಿದ ನಂತರ ಮತ್ತೆ ಸಚಿವೆ ಆಗಿ ಎಂದು ಅವರು ವಾಗ್ದಾಳಿ ನಡೆಸಿದರು.

ಜಗದೀಶ್ ಶೆಟ್ಟರ್ ಅವರು ಬೆಳಗಾವಿಗೆ ಸಂಬಂಧಿಸಿದವರಲ್ಲ, ಅವರು ಹೊರಗಿನವರು ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಮುರುಗೇಶ ನಿರಾಣಿ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಖಾನಾಪುರ ತಾಲೂಕಿನ ಹಟ್ಟಿಹೊಳಿಯವರು. ಆದರೆ, ಈಗ ಚುನಾವಣೆಗೆ ನಿಂತಿದ್ದು ಮಾತ್ರ ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ. ಆದ್ದರಿಂದ ನೀವು ಹೊರಗಿನವರ ಅಥವಾ ಒಳಗಿನವರ ಎಂದು ಪ್ರಶ್ನಿಸಿದ ಮುರುಗೇಶ್ ನಿರಾಣಿ ಅವರು, ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ವೀರೇಂದ್ರ ಪಾಟೀಲ್ ಗುಲ್ಬರ್ಗದವರಾಗಿದ್ದರೂ ಬಾಗಲಕೋಟೆಯಿಂದ ಸ್ಪರ್ಧೆ ನಡೆಸಿದ್ದರು. ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ, ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದ ಇತಿಹಾಸ ಇದ್ದು ಇವರೆಲ್ಲರೂ ಎಲ್ಲಿಯವರು. ನಿಮ್ಮ ಪಕ್ಷದಲ್ಲೇ ಇಂತಹ ಸಾವಿರಾರು ಉದಾಹರಣೆ ಇದೆ. ಚುನಾವಣೆಯ ಗಿಮಿಕ್ ಮಾಡಿ ಶೆಟ್ಟರ್ ಅವರ ಅಡ್ರೆಸ್ ಕೇಳಿ ಹೊರಗಿನವರು ಎಂದು ಹೇಳುತ್ತಿರುವುದು ತಪ್ಪಲ್ಲವೇ ಎಂದು ಮುರುಗೇಶ ನಿರಾಣಿ ಕಿಡಿ ಕಾರಿದರು.