ನವದೆಹಲಿ: ಜಗತ್ತಿನ ಅತೀ ದೊಡ್ಡ ಹಾಗೂ ಭಾರೀ ಗಾತ್ರದ ಹಾವು (big snake) ಭಾರತದಲ್ಲಿ ಬದುಕಿತ್ತು ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ಗುಜರಾತಿನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ ಪಳಿಯುಳಿಕೆಗಳು (follisls) ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತು ಎಂಬುದನ್ನು ಸೂಚಿಸಿವೆ.

ವಿಜ್ಞಾನಿಗಳು ಇದನ್ನು ‘ವಾಸುಕಿ ಇಂಡಿಕಸ್’ ಎಂದು ಹೆಸರಿಸಿದ್ದು, 2005 ರಲ್ಲಿ ಐಐಟಿ-ರೂರ್ಕಿಯ ವಿಜ್ಞಾನಿಗಳು ಇದನ್ನು ಪತ್ತೆ ಮಾಡಿದ್ದಾರೆ ಮತ್ತು ಇತ್ತೀಚೆಗೆ ಇದು ಪ್ರಪಂಚದಲ್ಲಿ ಈವರೆಗೆ ಕಂಡುಬಂದ ಅತಿದೊಡ್ಡ ಹಾವು ಎಂದು ದೃಢಪಡಿಸಿದ್ದಾರೆ. ಈ ಹಾವುಗಳು 4.7 ಕೋಟಿ ವರ್ಷಗಳ ಹಿಂದೆ ಗುಜರಾತಿನ ಕಚ್‌ ಪ್ರದೇಶದ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು. ನಿನ್ನೆ ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ. ಈ ಜಾತಿಯ ಹಾವು 36ರಿಂದ ಸುಮಾರು 50 ಅಡಿ ಉದ್ದದವರೆಗೂ ಬೆಳೆಯುತ್ತಿತ್ತು ಎಂದು ವಿಶ್ಲೇಷಿಸಲಾಗಿದೆ.

 

ಇದು ವಿಶೇಷವಾಗಿ ಸರೀಸೃಪಗಳ ಮೂಲ ಮತ್ತು ವಿಕಾಸದ ಪ್ರಕ್ರಿಯೆಯಲ್ಲಿ ಭಾರತದ ನಿರ್ಣಾಯಕ ಲಿಂಕ್ ಅನ್ನು ಸ್ಥಾಪಿಸುತ್ತದೆ. ಸಂಶೋಧಕರು ಹಾವಿನಿಂದ 27 ಕಶೇರುಖಂಡಗಳನ್ನು ಕಂಡುಹಿಡಿದಿದ್ದಾರೆ ಮತ್ತು ಅವುಗಳಲ್ಲಿ ಕೆಲವು ದೊಡ್ಡ ಹೆಬ್ಬಾವಿನಂತೆ ಕಾಣುತ್ತವೆ. ಈ ಹಾವಿನ ಉದ್ದವು 11-15 ಮೀಟರ್ (ಸುಮಾರು 50 ಅಡಿ) ಇರಬಹುದು ಮತ್ತು ಅದು 1 ಟನ್ ತೂಕದ್ದಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.ʼ
ಗುರುವಾರ ‘ಸ್ಪ್ರಿಂಗರ್ ನೇಚರ್’ ಕುರಿತು ‘ವೈಜ್ಞಾನಿಕ ರಿಪೋರ್ಟ್ಸ್‌’ (‘Scientific Reports’ on ‘Springer Nature) ನಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಲಾಗಿದೆ.

“ಅದರ ದೊಡ್ಡ ಗಾತ್ರವನ್ನು ಪರಿಗಣಿಸಿ, ವಾಸುಕಿಯು ನಿಧಾನವಾಗಿ ಚಲಿಸುವ ಹೊಂಚುದಾಳಿ ಪರಭಕ್ಷಕವಾಗಿದ್ದು ಅದು ಅನಕೊಂಡಗಳು ಮತ್ತು ಹೆಬ್ಬಾವುಗಳಂತಹ ಸಂಕೋಚನ ಕ್ರಿಯೆಯ ಮೂಲಕ ತನ್ನ ಬೇಟೆಯಾಡುತ್ತಿತ್ತು. ಈ ಹಾವು ಕರಾವಳಿಯ ಸಮೀಪವಿರುವ ಜವುಗು ಪ್ರದೇಶದಲ್ಲಿ ಜಾಗತಿಕ ತಾಪಮಾನವು ಇಂದಿನಕ್ಕಿಂತ ಹೆಚ್ಚಿರುವ ಸಮಯದಲ್ಲಿ ವಾಸಿಸುತ್ತಿತ್ತು ಎಂದು ಐಐಟಿ-ರೂರ್ಕಿಯ ಪ್ಯಾಲಿಯಂಟಾಲಜಿಯಲ್ಲಿ ಪೋಸ್ಟ್‌ ಡಾಕ್ಟರಲ್ ಸಂಶೋಧಕರು ಮತ್ತು ಅಧ್ಯಯನದ ಪ್ರಮುಖ ಲೇಖಕರಾದ ದೇಬಜಿತ್ ದತ್ತಾ ಅವರು ದಿ ಗಾರ್ಡಿಯನ್‌ಗೆ ತಿಳಿಸಿದ್ದಾರೆ.
ಈ ಬೃಹತ್‌ ಹಾವಿನ ಪಳೆಯುಳಿಕೆಗೆ ಶಿವನೊಂದಿಗೆ ಸಂಬಂಧ ಹೊಂದಿರುವ ನಾಗ ಹಾವುಗಳ ರಾಜ ವಾಸುಕಿಯ ಹೆಸರನ್ನು ಇಡಲಾಗಿದೆ.

ಈ ವಾಸುಕಿಯ ಗಾತ್ರವು ಟೈಟಾನೊಬೊವಾಕ್ಕಿಂತ ದೊಡ್ಡದಾಗಿದೆ. ಟೈಟಾನೊಬೊವಾ ಕೊಲಂಬಿಯಾದಲ್ಲಿ ಸುಮಾರು 6 ಕೋಟಿ ವರ್ಷಗಳ ಹಿಂದೆ ವಾಸಿಸುತ್ತಿತ್ತು. ಇದು ಸುಮಾರು 43 ಅಡಿ ಉದ್ದ ಮತ್ತು ಒಂದು ಟನ್‌ಗಿಂತ ಹೆಚ್ಚು ತೂಕವನ್ನು ಹೊಂದಿತ್ತು.
“ವಾಸುಕಿಯ ಅಂದಾಜಿನ ದೇಹದ ಉದ್ದವನ್ನು ಟೈಟಾನೊಬೊವಾಕ್ಕೆ ಹೋಲಿಸಬಹುದು, ಆದರೂ ಟೈಟಾನೊಬೊವಾದ ಕಶೇರುಖಂಡವು ವಾಸುಕಿಗಿಂತ ಸ್ವಲ್ಪ ದೊಡ್ಡದಾಗಿದೆ. ಆದಾಗ್ಯೂ, ಈ ಹಂತದಲ್ಲಿ, ಟೈಟಾನೊಬೊವಾಗೆ ಹೋಲಿಸಿದರೆ ವಾಸುಕಿ ಹೆಚ್ಚು ದಪ್ಪವಾಗಿತ್ತೋ ಅಥವಾ ತೆಳ್ಳಗಿತ್ತೋ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ ಎಂದು ರೂರ್ಕಿಯ ಪ್ರೊಫೆಸರ್ ಹಾಗೂ ಅಧ್ಯಯನದ ಸಹ-ಲೇಖಕ, ಪ್ಯಾಲಿಯಂಟಾಲಜಿಸ್ಟ್ ಸುನೀಲ್ ಬಾಜಪೇಯಿ ಅವರು ಔಟ್ಲೆಟ್‌ ಗೆ ತಿಳಿಸಿದ್ದಾರೆ.

10 ಮೀಟರ್ (33 ಅಡಿ) ಉದ್ದವಾಗಿರುವ ಏಷ್ಯಾದ ರೆಟಿಕ್ಯುಲೇಟೆಡ್ ಹೆಬ್ಬಾವು ಈಗ ಜೀವಂತವಾಗಿರುವ ಅತಿದೊಡ್ಡ ಹಾವು ಎಂದು ಪರಿಗಣಿಸಲ್ಪಟ್ಟಿದೆ.
ವಾಸುಕಿಯ ಪಳಯುಳಿಕೆಗಳು ಈಗ ಶುಷ್ಕ ಮತ್ತು ಧೂಳಿನ ಪ್ರದೇಶದಲ್ಲಿ ಪಳೆಯುಳಿಕೆ ಕಂಡುಬಂದಿದೆಯಾದರೂ, ವಾಸುಕಿಯು ಭೂಮಿಯಲ್ಲಿ ಸಂಚರಿಸಿದಾಗ ಅದು ಜೌಗು ಪ್ರದೇಶವಾಗಿತ್ತು ಎಂದು ಬಾಜಪೇಯಿ ಹೇಳಿದ್ದಾರೆ.
ಆವಿಷ್ಕಾರವು ವಿಜ್ಞಾನಿಗಳಿಗೆ ಹಾವುಗಳ ವಿಕಸನದ ಬಗ್ಗೆ ಒಂದು ಒಳ ನೋಟವನ್ನು ನೀಡುತ್ತದೆ. ಆದರೆ ಖಂಡಗಳು ಕಾಲಾನಂತರದಲ್ಲಿ ಹೇಗೆ ಭೌತಿಕವಾಗಿ ಬದಲಾಗಿವೆ ಮತ್ತು ಪ್ರಪಂಚದಾದ್ಯಂತ ವಿವಿಧ ಜಾತಿಯ ಪ್ರಾಣಿಗಳು ಹೇಗೆ ಹರಡಿವೆ ಎಂಬುದರ ಬಗ್ಗೆ ಆಳವಾದ ತಿಳಿವಳಿಕೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ವಾಸುಕಿ ಇಂಡಿಕಸ್‌ನ ಪಳೆಯುಳಿಕೆಯನ್ನು IIT-ರೂರ್ಕಿಯ ಪ್ರಾಗ್ಜೀವಶಾಸ್ತ್ರದ ಪ್ರಾಧ್ಯಾಪಕ ಸುನೀಲ ಬಾಜಪೇಯಿ ಅವರು 2005ರಲ್ಲಿ ಕಂಡುಹಿಡಿದರು. ಅವರು ಕಚ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಅವಶೇಷಗಳನ್ನು ಪತ್ತೆಹಚ್ಚಿದರು.
ಆ ಸಮಯದಲ್ಲಿ, ʼಸೈಂಟಿಫಿಕ್ ಅಮೇರಿಕನ್ʼ ಪ್ರಕಾರ, ಅವಶೇಷಗಳು ಈಗಾಗಲೇ ತಿಳಿದಿರುವ ಇತಿಹಾಸಪೂರ್ವ ಜಾತಿಯ ಮೊಸಳೆಗೆ ಸೇರಿವೆ ಎಂದು ಬಾಜಪೇಯಿ ನಂಬಿದ್ದರು. 2022ರವರೆಗೆ ಪಳೆಯುಳಿಕೆ ಅವರ ಪ್ರಯೋಗಾಲಯದಲ್ಲಿ ಇತ್ತು. ಅದೇ ವರ್ಷ ಪ್ರಯೋಗಾಲಯಕ್ಕೆ ಸೇರಿದ ದತ್ತಾ ಅವುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಆ ಚೂರುಗಳು ಬೇರೆ ಜಾತಿಗೆ ಸೇರಿದವು ಎಂದು ಇಬ್ಬರಿಗೂ ಅರಿವಾಯಿತು.
“ಪಳೆಯುಳಿಕೆಯು 2005ರಲ್ಲಿ ಕಂಡುಬಂದಿದೆ, ಆದರೆ ನಾನು ಬೇರೆ ಬೇರೆ ಪಳೆಯುಳಿಕೆಗಳ ಮೇಲೆ ಕೆಲಸ ಮಾಡುತ್ತಿರುವುದರಿಂದ, ಅದು ಹಾಗೇ ಉಳಿಯಿತು. 2022ರಲ್ಲಿ ನಾವು ಪಳೆಯುಳಿಕೆಯನ್ನು ಮರು-ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಆರಂಭದಲ್ಲಿ ಅದರ ಗಾತ್ರದಿಂದಾಗಿ, ಇದು ಮೊಸಳೆ ಎಂದು ನಾನು ಭಾವಿಸಿದೆ. ಆದರೆ ನಂತರ ಅದು ಹಾವಿನದ್ದು ಎಂದು ಗೊತ್ತಾಯಿತು” ಎಂದು ಬಾಜಪೇಯಿ ತಿಳಿಸಿದರು.

ಗುಜರಾತ್‌ನ ಕಛ್‌ ಪ್ರದೇಶದ ಪನಾನ್‌ಂದ್ರೋ ಎಂಬಲ್ಲಿ ಸುಣ್ಣಕಲ್ಲು ಗಣಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. 2005ರ ಒಂದು ದಿನ ಗಣಿಯಲ್ಲಿ ಮಣ್ಣು ಅಗೆಯುವಾಗ ಕಾರ್ಮಿಕರಿಗೆ ಯಾವುದೋ ಪ್ರಾಣಿಯ ಮೂಳೆಯಂತಹ ಹಲವು ವಸ್ತುಗಳು ದೊರೆತಿದ್ದವು. ತೀರಾ ವಿಚಿತ್ರವಾಗಿ ಇದ್ದುದ್ದರಿಂದ ಆ ಬಗ್ಗೆ ಪರಿಶೀಲನೆ ನಡೆಸಲು ವಿಜ್ಞಾನಿಗಳನ್ನು ಕರೆಸಲಾಗಿತ್ತು. ಐಐಟಿ–ರೂರ್ಕಿಯ ವಿಜ್ಞಾನಿ ಸುನೀಲ್ ವಾಜಪೇಯಿ ಸ್ಥಳಕ್ಕೆ ಭೇಟಿ ನೀಡಿ, ಉತ್ಖನನ ನಡೆಸಿದ್ದರು. ಅಲ್ಲಿ ದೊರೆತ ಪಳೆಯುಳಿಕೆಗಳು ಯಾವುದೋ ದೊಡ್ಡ ಸರೀಸೃಪವೊಂದರ ಬೆನ್ನುಮೂಳೆಗಳಂತಹ ರಚನೆಗಳಾಗಿದ್ದವು. ಅಂತಹ ಒಟ್ಟು 27 ಪಳೆಯುಳಿಕೆಗಳು ಅವರಿಗೆ ದೊರೆತಿದ್ದವು. ಅದೇ ಸ್ಥಳದಲ್ಲಿ ಮೊಸಳೆಗಳ ಹಲ್ಲುಗಳನ್ನು ಹೋಲುವ ಮತ್ತು ದೊಡ್ಡ ಮೀನುಗಳ ಹಲ್ಲುಗಳನ್ನು ಹೋಲುವ ಹಲವು ಪಳೆಯುಳಿಕೆಗಳೂ ಪತ್ತೆಯಾಗಿದ್ದವು. ಇದು ಯಾವುದೋ ಒಂದು ದೊಡ್ಡ ಮೊಸಳೆಯ ಬೆನ್ನುಮೂಳೆ ಎಂದು ನಿರ್ಧರಿಸಿ, ತಮ್ಮ ಸಂಶೋಧನಾಲಯದಲ್ಲಿ ಸಂರಕ್ಷಿಸಿ ಇಟ್ಟರು.

2005ರಲ್ಲಿ ಹೀಗೆ ತೆಗೆದಿರಿಸಲಾಗಿದ್ದ ಪಳೆಯುಳಿಕೆಗಳ ಮೇಲೆ 2022ರವರೆಗೂ ಯಾವುದೇ ಸಂಶೋಧನೆ ಅಥವಾ ಅಧ್ಯಯನ ನಡೆಯಲಿಲ್ಲ. ಆದರೆ 2022ರ ಮೇ ವೇಳೆಗೆ ವಾಡಿಯಾ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳ ತಂಡವು ಒಂದು ಅಧ್ಯಯನ ವರದಿ ಪ್ರಕಟಿಸಿತ್ತು. ಲಡಾಖ್‌ನ ಹಿಮಗಾಡಿನಲ್ಲಿ ಆ ವಿಜ್ಞಾನಿಗಳ ತಂಡ ದೈತ್ಯ ಹಾವೊಂದರ ಪಳೆಯುಳಿಕೆಯನ್ನು ಪತ್ತೆ ಮಾಡಿತ್ತು. ದೀರ್ಘ ಅಧ್ಯಯನದ ನಂತರ ಅದು ಸುಮಾರು 3.8 ಕೋಟಿ ವರ್ಷಗಳ ಹಿಂದೆ ಇದ್ದ ಮ್ಯಾಡ್ಸೊಐಡ್‌ ಪ್ರಭೇದದ ಉಪಪ್ರಭೇದಕ್ಕೆ ಸೇರಿದ ಹಾವಿನದ್ದು ಎಂದು ಪತ್ತೆಯಾಗಿತ್ತು. ಆ ಹಾವಿನಬೆನ್ನು ಮೂಳೆಗಳ ಚಿತ್ರವನ್ನೂ ಅಧ್ಯಯನ ವರದಿಯಲ್ಲಿ ಪ್ರಕಟಿಸಲಾಗಿತ್ತು. ಅದೇ ಸಮಯದಲ್ಲಿ ಐಐಟಿ–ರೂರ್ಕಿಯ ವಿಜ್ಞಾನಿ ಸುನೀಲ್‌ ವಾಜಪೇಯಿ ಅವರ ತಂಡಕ್ಕೆ, ದೇವಜಿತ್ ದತ್ತಾ ಎಂಬ ಮತ್ತೊಬ್ಬ ವಿಜ್ಞಾನಿ ಸೇರಿಕೊಂಡರು.

ಸುನೀಲ್‌ ಅವರ ಪ್ರಯೋಗಾಲಯದಲ್ಲಿ ಇದ್ದ ಈ ಪಳೆಯುಳಿಕೆಗಳ ಮೇಲೆ ತುಸು ಅಧ್ಯಯನ ನಡೆಸಿದರು. ಆಗಲೇ ಅವರಿಗೆ ಅದು ಮೊಸಳೆಯದ್ದಲ್ಲ ಎಂಬ ಅನುಮಾನ ಹುಟ್ಟಿದ್ದು. ಏಕೆಂದರೆ ಬೆನ್ನುಮೂಳೆಗಳು ಹರಡಿಕೊಂಡಿರುವ ರೀತಿ ಮತ್ತು ಅವು ಪರಸ್ಪರ ಜೋಡಣೆಯಾಗಿದ್ದ ರೀತಿ ಮೊಸಳೆಗಿಂತ ತುಸು ಭಿನ್ನವಾಗಿದ್ದವು. ಈ ಬಗ್ಗೆ ಪರಸ್ಪರ ಚರ್ಚಿಸಿದ ಸುನೀಲ್‌ ಮತ್ತು ದೇವಜಿತ್ ಅವರು ಆ ಪಳೆಯುಳಿಕೆಯ ಮೇಲೆ ಹೆಚ್ಚಿನ ಅಧ್ಯಯನ ನಡೆಸಲು ನಿರ್ಧರಿಸಿದರು. ಹಲವು ತಿಂಗಳ ಅಧ್ಯಯನದ ನಂತರ ಅದೊ ಗೊಂಡ್ವಾನಾ (ಆಸ್ಟ್ರೇಲಿಯಾ, ಭಾರತ ಉಪಖಂಡ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡಗಳನ್ನು ಒಳಗೊಂಡಿದ್ದ ಬೃಹತ್ ಖಂಡ) ಖಂಡದಲ್ಲಿ ಇದ್ದ ಮ್ಯಾಡ್ಸೊಐಡ್‌ ಹಾವಿನ ಜಾತಿಗೆ ಸೇರಿದ, ಉಪಪ್ರಭೇದವೊಂದರ ಪಳೆಯುಳಿಕೆಯಾಗಿತ್ತು. ಈ ಹಾವು ಸುಮಾರು 4.7 ಕೋಟಿ ವರ್ಷಗಳ ಹಿಂದೆ ಬದುಕಿತ್ತು ಎಂಬುದನ್ನು ಸಂಶೋಧನೆ ಬಹಿರಂಗಪಡಿಸಿತು.

ಮ್ಯಾಡ್ಸೊಐಡ್‌ ಈವರೆಗಿನ ಅತ್ಯಂತ ದೈತ್ಯ ಹಾವುಗಳ ಪ್ರಭೇದವಾಗಿದೆ. ಹೀಗಾಗಿ ಈ ಇಬ್ಬರೂ ವಿಜ್ಞಾನಿಗಳು ತಮ್ಮಲ್ಲಿದ್ದ ಬೆನ್ನುಮೂಳೆಗಳ ಪಳೆಯುಳಿಕೆಗಳನ್ನು ಬಳಸಿಕೊಂಡು, ಆ ಹಾವಿನ ಉದ್ದವನ್ನು ಅಂದಾಜು ಮಾಡಿದರು. ಅದಾಗಲೇ ಪ್ರಚಲಿತದಲ್ಲಿದ್ದ ಎರಡು ಸೂತ್ರಗಳನ್ನು ಬಳಸಿಕೊಂಡು ಹಾವಿನ ಉದ್ದವನ್ನು ಅಂದಾಜು ಮಾಡಿದರು. ಒಂದು ಅಂದಾಜಿನ ಪ್ರಕಾರ ಆ ಹಾವಿನ ಉದ್ದ 11 ಮೀಟರ್‌ (36.3 ಅಡಿ). ಇನ್ನೊಂದು ಅಂದಾಜಿನ ಪ್ರಕಾರ ಆ ಹಾವಿನ ಉದ್ದ 15.5 ಮೀಟರ್‌ (51.3 ಅಡಿ). ಆ ಹಾವಿನ ಅಂದಾಜು ಉದ್ದ 51 ಅಡಿಯನ್ನು ಮೀರಿಸಿತ್ತು. ಅದು ನಿಜವೇ ಆಗಿದ್ದರೆ, ಈವರೆಗೆ ವಿಜ್ಞಾನಿಗಳಿಗೆ ದೊರೆತಿರುವ ಪಳೆಯುಳಿಕೆಗಳಲ್ಲೇ ಅತ್ಯಂತ ದೊಡ್ಡ ಹಾವಿನ ಪಳೆಯುಳಿಕೆ ಇದಾಗಿತ್ತು. ವಿಜ್ಞಾನಿಗಳು ಅದನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡರು. ಹೌದು, ಅದು ಆವರೆಗಿನ ಅತ್ಯಂತ ದೊಡ್ಡ ಪಳೆಯುಳಿಕೆಯಾಗಿದ್ದ ಟೈಟನಾಬೊವಾದ್ದಕ್ಕಿಂತಲೂ (ಸುಮಾರು 42 ಅಡಿ) ದೊಡ್ಡ ಹಾವಿನದ್ದಾಗಿತ್ತು. ಟೈಟನಾಬೊವಾ 5.8 ಕೋಟಿ ವರ್ಷಗಳಿಂದ 6.6 ಕೋಟಿ ವರ್ಷಗಳ ಹಿಂದೆ ಬದುಕಿದ್ದ ದೈತ್ಯ ಹಾವಾಗಿತ್ತು. ಆ ಹಾವಿನ ಉದ್ದ ಅಗಲದ ದಾಖಲೆಗಳನ್ನೂ ಈ ಪಳೆಯುಳಿಕೆಯು ಮೀರಿಸುತ್ತಿತ್ತು.

ಮ್ಯಾಡ್ಸೊಐಡ್‌ ಕುಟುಂಬಕ್ಕೆ ಸೇರಿದ್ದರೂ ತನ್ನದೇ ವಿಶೇಷ ರಚನೆಗಳನ್ನು ಹೊಂದಿದ್ದ ಈ ಹಾವನ್ನು ವಿಜ್ಞಾನಿಗಳು ‘ವಾಸುಕಿ ಇಂಡಿಕಸ್‌’ ಎಂದು ಕರೆದರು. ವಾಸುಕಿ ಇಂಡಿಕಸ್‌ನ ಅತ್ಯಂತ ದೊಡ್ಡ ಬೆನ್ನುಮೂಳೆಯ ಅಗಲ 11 ಸೆಂ.ಮೀಟರ್‌. ಆ ಪ್ರಕಾರ ಆ ಹಾವಿನ ದೇಹದ ಅಗಲ 44 ಸೆಂ.ಮೀ. ಎಂದು ಅಂದಾಜಿಸಲಾಗಿತ್ತು. ಉದ್ದ ಮತ್ತು ಅಗಲದ ಆಧಾರದಲ್ಲಿ ಆ ಹಾವಿನ ತೂಕವನ್ನೂ ಅಂದಾಜು ಮಾಡಲಾಯಿತು. ‘ವಾಸುಕಿ ಇಂಡಿಕಸ್‌’ ಸುಮಾರು ಒಂದು ಟನ್‌ ತೂಗುತ್ತಿತ್ತು ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದರು. ಹೀಗೆ ‘ವಾಸುಕಿ ಇಂಡಿಕಸ್‌’ನ ಈ ಪಳೆಯುಳಿಕೆಗಳು ಈವರೆಗೆ ದೊರೆತ ಅತ್ಯಂತ ದೊಡ್ಡ ಹಾವಿನ ಪಳೆಯುಳಿಕೆ ಎಂದಾಗಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ.

‘ವಾಸುಕಿ ಇಂಡಿಕಸ್’ನ ಬೆನ್ನುಮೂಳೆಗಳ ಪಳೆಯುಳಿಕೆಗಳು
ಮೊಸಳೆ, ಮೀನೇ ಆಹಾರ

ಬೆನ್ನುಮೂಳೆಯ ಪಳೆಯುಳಿಕೆಗಳು ಹಾವಿನದ್ದು ಎಂದು ಗೊತ್ತಾದ ನಂತರ, ಅವುಗಳ ಜತೆಯಲ್ಲೇ ದೊರೆತಿದ್ದ ಹಲ್ಲಿನ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಮತ್ತೆ ಪರಿಶೀಲಿಸಿದರು. ‘ವಾಸುಕಿ ಇಂಡಿಕಸ್‌’ ಬದುಕಿದ್ದ ಕಾಲದಲ್ಲೇ ಇದ್ದ ದೈತ್ಯ ಮೊಸಳೆಗಳು ಮತ್ತು ಮೀನುಗಳ ಹಲ್ಲುಗಳ ಪಳೆಯುಳಿಕೆಗಳು ಅದಾಗಿದ್ದವು.

ಆ ಕಾಲದ ಮೊಸಳೆ ಮತ್ತು ಮೀನುಗಳು ‘ವಾಸುಕಿ ಇಂಡಿಕಸ್‌’ನ ಪ್ರಧಾನ ಆಹಾರ ಎಂಬ ನಿರ್ಧಾರಕ್ಕೆ ಬಂದರು. ಇದಲ್ಲದೇ ಇನ್ನಷ್ಟು ದೈತ್ಯ ಜಲಚರಗಳನ್ನೂ ‘ವಾಸುಕಿ’ ಆಹಾರವಾಗಿ ಸೇವಿಸುತ್ತಿತ್ತು. ದೈತ್ಯ ದೇಹದ ಕಾರಣ ಈ ಹಾವು ಅತ್ಯಂತ ನಿಧಾನವಾಗಿ ಚಲಿಸುತ್ತಿತ್ತು. ಅರೆಜೌಗು ಪ್ರದೇಶವು ವಾಸುಕಿ ಇಂಡಿಕಸ್‌ನ ಆವಾಸಸ್ಥಾನವಾಗಿತ್ತು. ಇದು ಹೊಂಚುಹಾಕಿ ಕುಳಿತು ಬೇಟೆಯಾಡುತ್ತಿತ್ತು. ಬಲಿಪ್ರಾಣಿಯನ್ನು ನುಂಗಿದ ನಂತರ ಈಗಿನ ಹೆಬ್ಬಾವುಗಳಂತೆಯೇ ವಿಶ್ರಮಿಸುತ್ತಿತ್ತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ವಾಸುಕಿ ಇಂಡಿಕಸ್‌ ಬದುಕಿದ್ದ ಕಾಲದಲ್ಲಿ ಈಗಿನ ಗುಜರಾತ್‌ನ ಕಛ್‌ ಅರೆಜೌಗು ಪ್ರದೇಶದಂತೆಯೇ ಇತ್ತು. ವರ್ಷದ ಕೆಲವು ತಿಂಗಳುಗಳಲ್ಲಿ ಸಮುದ್ರದ ನೀರು ಇಲ್ಲಿ ತುಂಬಿಕೊಳ್ಳುತ್ತಿತ್ತು ಮತ್ತು ನಂತರ ಸಮುದ್ರದ ನೀರು ಹಿಂದೆ ಸರಿಯುತ್ತಿತ್ತು. ಅಂತಹ ಅರೆಜೌಗು ಪ್ರದೇಶವು ವಾಸುಕಿ ಇಂಡಿಕಸ್‌ಗೆ ಅಗತ್ಯವಿದ್ದ ಮೊಸಳೆ ಮತ್ತು ಮೀನುಗಳನ್ನು ಒದಗಿಸಿಕೊಡುತ್ತಿತ್ತು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

‘ವಾಸುಕಿ ಇಂಡಿಕಸ್‌’

‘ಹಿಂದೂ ಪುರಾಣಗಳಲ್ಲಿ ಬರುವ ವಾಸುಕಿಯ ಹೆಸರನ್ನೇ ಈ ಹಾವಿಗೆ ಇಡಲಾಗಿದೆ’ ಎಂದು ಅಧ್ಯಯನ ವರದಿಯಲ್ಲಿ ವಿಜ್ಞಾನಿಗಳು ಹೇಳಿದ್ದಾರೆ. ಇದಷ್ಟೇ ಅಲ್ಲದೇ, ಭಾರತದ ನೆಲದಲ್ಲೇ ‘ವಾಸುಕಿ ಇಂಡಿಕಸ್‌’ ಉಪಪ್ರಬೇಧವು ವಿಕಾಸವಾಗಿತ್ತು.

ಗೊಂಡ್ವಾನಾ ಮಹಾಖಂಡದಿಂದ ಭಾರತ ಉಪಖಂಡವು ಬೇರ್ಪಟ್ಟು, ಯುರೇಷ್ಯಾ ಖಂಡದತ್ತ ಚಲಿಸುತ್ತಿದ್ದ ಕಾಲವದು. ಈಗಿನ ಭಾರತದ ಪಶ್ಚಿಮ ಭಾಗ, ಈಗಿನ ಪಾಕಿಸ್ತಾನದಲ್ಲಿ ‘ವಾಸುಕಿ ಇಂಡಿಕಸ್‌’ ಯಥೇಚ್ಛವಾಗಿದ್ದವು. ಭಾರತ ಉಪಖಂಡವು ಯುರೇಷ್ಯಾ ಖಂಡಕ್ಕೆ ಜತೆಯಾದ ನಂತರ ಈ ಹಾವುಗಳು ಯುರೇಷ್ಯಾಗೂ ದಾಟಿಕೊಂಡವು. ನಂತರದಲ್ಲಿ ಆಫ್ರಿಕಾ ಖಂಡಕ್ಕೂ ಹೋದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಹಾವು ಭಾರತದಲ್ಲೇ ವಿಕಾಸವಾಗಿದ್ದರಿಂದಲೂ ಅದಕ್ಕೆ ಭಾರತದ್ದೇ ಹೆಸರು ಇಡಲಾಗಿದೆ ಎಂಬುದು ವಿಜ್ಞಾನಿಗಳ ವಿವರಣೆ.

ಈ ಹಾವಿಗೆ ನಮ್ಮ ಕಾಲದ ವಾಸುಕಿ ಎಂಬ ಹೆಸರು ಇಡಲಾಗಿದೆ. ಆದರೆ ಈ ಹಾವಿನ ಪ್ರಭೇದ ಸಂಪೂರ್ಣವಾಗಿ ಅಳಿದುಹೋಗಿ 4.63 ಕೋಟಿ ವರ್ಷಗಳ ನಂತರ ಆಧುನಿಕ ಮಾನವ ‘ಹೋಮೊ ಸೆಪಿಯನ್ಸ್‌’ ವಿಕಾಸವಾಗಿದ್ದು.

ಗರಿಷ್ಠ ಉಷ್ಣಾಂಶ

‘ವಾಸುಕಿ ಇಂಡಿಕಸ್‌’ ಎಲ್ಲಾ ಹಾವುಗಳಂತೆ ತಣ್ಣನೆಯ ರಕ್ತದ ಸರೀಸೃಪವಾಗಿತ್ತು. ಹೀಗಾಗಿ ಅದಕ್ಕೆ ಅತಿಬಿಸಿಯ ಅವಶ್ಯಕತೆ ಇತ್ತು. ಅದು ಬದುಕಿದ್ದ ಅವಧಿಯಲ್ಲಿ, ಅಂದರೆ ಸುಮಾರು 4.7 ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲ್ಮೈ ಸರಾಸರಿ ಉಷ್ಣಾಂಶವೂ ಅಧಿಕವಾಗೇ ಇದ್ದಿರಬೇಕು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ತಣ್ಣನೆಯ ರಕ್ತದ ಇಷ್ಟು ದೈತ್ಯ ಹಾವೊಂದು ಜೀವಿಸಬೇಕಾದರೆ 27 ಡಿಗ್ರಿ ಸೆಲ್ಸಿಯಸ್‌ನಿಂದ 28.5 ಡಿಗ್ರಿ ಸೆಲ್ಸಿಯಸ್‌ನಷ್ಟಾದರೂ ಸರಾಸರಿ ಉಷ್ಣಾಂಶ ಇರಬೇಕಿತ್ತು. ಇದು ಭೂಮಿಯ ಈಗಿನ ಸರಾಸರಿ ಉಷ್ಣಾಂಶಕ್ಕಿಂತ ಕಡಿಮೆ. ಬಹುಶಃ 4.7 ಕೋಟಿ ವರ್ಷಗಳ ಹಿಂದೆ ಭೂಮಿಯ ಭೂಮಿಯ ಮೇಲ್ಮೈ ಉಷ್ಣಾಂಶ ಈಗಿನದಕ್ಕಿಂತ ಹೆಚ್ಚೇ ಇದ್ದಿರಬೇಕು ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ. ‘ವಾಸುಕಿ ಇಂಡಿಕಸ್‌’ ಬದುಕಿದ್ದ ಅವಧಿಗಿಂತ 1.5 ಕೋಟಿ ವರ್ಷಗಳಷ್ಟು ಹಿಂದೆಯೇ ಡೈನೊಸಾರ್‌ಗಳು ಅಳಿದು ಹೋಗಿದ್ದವು. ವಿವಿಧ ಕಾರಣಗಳಿಂದಾಗಿ ಭೂಮಿಯ ಮೇಲಿನ ಉಷ್ಣಾಂಶ ಇಳಿಕೆಯಾಗಿದ್ದೇ ಡೈನೊಸಾರ್‌ಗಳು ಅಳಿದುಹೋಗಲು ಕಾರಣ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅತಿಹೆಚ್ಚು ಉಷ್ಣಾಂಶದಲ್ಲಿ ಬದುಕಿದ್ದ ‘ವಾಸುಕಿ ಇಂಡಿಕಸ್‌’ ಉಷ್ಣಾಂಶ ಇಳಿಕೆಯಾಗಿದ್ದರಿಂದಲೇ ಅಳಿದು ಹೋಯಿತೇ ಎಂಬುದರತ್ತ ಈಗ ಸಂಶೋಧನೆ ಮುಂದುವರಿದಿದೆ.