ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಪ್ರತಿಷ್ಠಿತ ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ತಂಗಲಿರುವುದು ಅಪರೂಪದಲ್ಲೇ ಅಪರೂಪ ಎನಿಸಿದೆ. ಪ್ರಧಾನಿ ಮೋದಿ ತಂಗಲಿರುವ ಕಾರಣದಿಂದ ಇದೀಗ ಬಿಜೆಪಿ ನಾಯಕರು ಬೆಳಗಾವಿಯತ್ತ ಗಮನಹರಿಸಿದ್ದು ಬಿಜೆಪಿ ಪಾಲಿಗೆ ಬೆಳಗಾವಿ ಶಕ್ತಿ ಕೇಂದ್ರ ಎನಿಸಿದೆ.
ರಾತ್ರಿ 8.50 ಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವರು. ನಗರದ ಪ್ರತಿಷ್ಠಿತ ಮಾಜಿ ಸಚಿವೆ, ನಿಪ್ಪಾಣಿ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ-ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪರಿವಾರಕ್ಕೆ ಸೇರಿರುವ ಐಟಿಸಿ ವೆಲ್ ಕಮ್ ಹೋಟೆಲ್ ನಲ್ಲಿ ಅವರು ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 10:55 ಕ್ಕೆ ಬೆಳಗಾವಿ ಹೋಟೆಲ್ ನಿಂದ ತೆರಳಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ನಡೆಯಲಿರುವ ಬೃಹತ್ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಲಿರುವರು. ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಡೀ ಬೆಳಗಾವಿ ಮಹಾನಗರದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಇಂದು ಬೆಳಗ್ಗೆಯಿಂದ ನಾಳೆ ಸಂಜೆವರೆಗೆ ಬೆಳಗಾವಿಯಲ್ಲಿ ಡ್ರೋನ್ ಹಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ನಿತೀಶ ಪಾಟೀಲ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ತಾಲೂಕಿನ ವ್ಯಾಪ್ತಿಯನ್ನು ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದೆ.