ಪ್ರಧಾನಿ ಮೋದಿಯವರು ಬಂದಿಳಿದ ತಕ್ಷಣ ಎಷ್ಟೊತ್ತಿನಿಂದ ನಿಂತಿದ್ದಿರಿ ಎಂದು ಕೇಳಿದ್ರು. ನಾವು 6 ಗಂಟೆಯಿಂದ ನಿಂತಿದ್ದಿವಿ ಅಂತಾ ಹೇಳಿದ್ವಿ ಆಗ ಎಲೆಕ್ಷನ್ ಟೈಂನಲ್ಲಿ ಜಾಸ್ತಿ ಹೊತ್ತು ನಿಂತಿದ್ರಲ್ಲ ಅಂದ್ರು. ಅದಕ್ಕೆ ನಾವು ನಿಮ್ಮನ್ನು ನೋಡುವುದೇ ಒಂದು ಭಾಗ್ಯ ಅಂದ್ವಿ. ಅವರನ್ನು ನೋಡಿ ಶ್ರೀರಾಮನನ್ನು ನೋಡಿದಷ್ಟು ಆನಂದವಾಯ್ತು.
ಪ್ರಧಾನಿ ಮೋದಿ ಆಗಮಿಸಿದಾಗ ನಾವು ಅಬ್ ಕೀ ಬಾರ್.. ಎಂದಾಗ ಚಾರ್ ಸೋ ಫಾರ್ ಎಂದು ಮೋದಿಯವರು ಹೇಳಿದ್ರು. ಅವರನ್ನು ವೆಲ್ ಕಮ್ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಯಮಕನಮರಡಿ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿರುವ ಸಂಗೀತಾ ಸಂತಸ ವ್ಯಕ್ತಪಡಿಸಿದರು.
ಬೆಳಗಾವಿ: ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಆತ್ಮಿಯವಾಗಿ ಸ್ವಾಗತಿಸಿದ್ದಾರೆ.
ಜಗದೀಶ ಶೆಟ್ಟರ್ ಹಾಗೂ ಅಣ್ಣಾ ಸಾಹೇಬ ಜೊಲ್ಲೆ ಪರವಾಗಿ ಪ್ರಚಾರಕ್ಕೆ ಆಗಮಿಸಿದ ನರೇಂದ್ರ ಮೋದಿಯವರನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.
ಬಳಿಕ ಮೋದಿಯವರು ಸಾಂಬ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಕಾಕತಿ ಬಳಿ ಇರುವ ಐಟಿಸಿ ವೆಲ್ ಕಮ್ ಹೊಟೆಲ್ ನಲ್ಲಿ ವಾಸ್ತವ್ಯಕ್ಕೆ ತೆರಳಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ತಯಾರಿಸಿದ್ದಾರೆ. ಮೊದಲಬಾರಿಗೆ ಬೆಳಗಾವಿಯಲ್ಲಿ ವಾಸ್ತವ್ಯ ಹೋಡಲಿರುವ ಪ್ರಧಾನಿ ಮೋದಿಗೆ ಊಟದ ಸವಿ ಬಡಿಸಲು ಖಾದ್ಯ ತಯಾರಿಸಲಾಗಿದೆ.
ಬೆಳಗ್ಗೆ ಮೋದಿಯವರು ಯುಡಿಯುರಪ್ಪ ಮಾರ್ಗದಲ್ಲಿ ಇರುವ ಮಾಲಿನಿ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಮಾತನಾಡಲಿದ್ದಾರೆ. ಈ ಸಮವೇಶದಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.
ಭವ್ಯ ಸ್ವಾಗತ :
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರಿಗೆ ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್, ಚಿಕ್ಕೋಡಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಸೇರಿ ಗಣ್ಯರು ಸ್ವಾಗತ ಕೋರಿದರು.
ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ನಾಯಕರ ಜತೆಗೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 15 ಕಾರ್ಯಕರ್ತರಿಗೆ ಅವಕಾಶ ನೀಡಲಾಗಿತ್ತು. ಬಾಳೇಶ ಚವ್ವನ್ನವರ್, ರಾಜೇಶ್ವರಿ ಒಡೆಯರ್, ಸುಭಾಷ್ ಸಣ್ಣ ವೀರಪ್ಪನವರ್ ಸೇರಿ ಬೆಳಗಾವಿಯ 15 ಹಲವು ಸಮುದಾಯಗಳ ಮುಖಂಡರು ಮೋದಿ ಅವರನ್ನು ಸ್ವಾಗತಿಸಿದರು.
ಎಳನೀರು ಸೇವಿಸಿ ವಿಶ್ರಮಿಸಿದ ಮೋದಿ :
ನಗರದ ಕಾಕತಿಯಲ್ಲಿರುವ ಐಟಿಸಿ ವೆಲ್‌ಕಮ್ ಹೋಟೆಲ್‌ನಲ್ಲಿ ಮೋದಿ ಅವರು ವಾಸ್ತವ್ಯ ಮಾಡಿದ್ದು, ಅವರಿಗಾಗಿ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಗುಜರಾತಿ ಸೇರಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಶೈಲಿಯ ಖಾದ್ಯಗಳನ್ನು ಸಿದ್ಧಪಡಿಸಿದ್ದು, ಮೂವತ್ತಕ್ಕೂ ಹೆಚ್ಚು ಬಗೆಯೆ ಪದಾರ್ಥಗಳನ್ನು ತಯಾರಿಸಲಾಗಿದೆ. ಇವುಗಳಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ, ಟೊಮ್ಯಾಟೊ ಸಾರು, ದಾಲ್ ಕೂಡ ಸೇರಿವೆ. ಊಟಕ್ಕಾಗಿ ಸುಮಾರು ಮೂವತ್ತಾರು ನಮೂನೆಯ ಆಹಾರಕ್ಕಾಗಿ ಸಿದ್ಧಪಡಿಸಲಾಗಿತ್ತು. ಆದರೆ ಮೋದಿ ಅವರು ಎಳನೀರು ಮಾತ್ರ ಸೇವಿಸಿದರು ಎಂದು ಮೂಲಗಳು ತಿಳಿಸಿವೆ.
ಆದರೆ, ರಾತ್ರಿ ಆಗಮಿಸಿದ ಕಾರಣ ಅವರು ಯಾವ ನಾಯಕರ ಜೊತೆ ಯಾವ ರಾಜಕೀಯ ಚರ್ಚೆಯನ್ನು ನಡೆಸಿಲ್ಲ.
ಮೋದಿಯವರು ಕೊಲ್ಲಾಪುರದಿಂದ ನೇರವಾಗಿ ಬೆಳಗಾವಿಗೆ ಆಗಮಿಸುವರು ಎಂದು ಹೇಳಲಾಗಿತ್ತು. ಆದರೆ ಅವರು ಕೊಲ್ಲಾಪುರದಿಂದ ಗೋವಾಕ್ಕೆ ತೆರಳಿ, ಅಲ್ಲಿ ಚುನಾವಣಾ ಪ್ರಚಾರ ನಡೆಸಿ ರಾತ್ರಿ ಬೆಳಗಾವಿಗೆ ಆಗಮಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಬಂದ ಅವರು ನೇರವಾಗಿ ಕಾಕತಿ ಬಳಿಯ ಐಟಿಸಿ ವೆಲ್ ಕಮ್ ಹೋಟೆಲ್ ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸುಮಾರು ಒಂದು ಗಂಟೆ ಕಾಲ ಸಂಚಾರ ವ್ಯವಸ್ಥೆ ನಿಲುಗಡೆಯಾಗಿತ್ತು.
ಬೆಳಗಾವಿ ಮಾರ್ಗದಲ್ಲಿ ಮೋದಿ ತೆರಳುತ್ತಿದ್ದಾಗ ಭಾರೀ ಸಂಖ್ಯೆಯಲ್ಲಿ ಜನ ನಿಂತು ಕಣ್ತುಂಬಿಕೊಂಡರು.
ಒಟ್ಟಾರೆ, ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿದ ನಂತರ ಜಿಲ್ಲೆಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ.