ಆರ್ಡಿ : ಆರ್ಡಿ ಶ್ರೀ ದುರ್ಗಾಪರಮೇಶ್ವರಿ, ಸಿದ್ಧಿ ವಿನಾಯಕ, ಚಿತ್ತೇರಿ ದೇವಳದಲ್ಲಿ ಎ.29 ರಂದು ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಕೆಂಡೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಪುರಾತನ ಕಾಲದಿಂದಲೂ ತನ್ನದೇ ಆದ ಕಾರಣಿಕದ
ಶಕ್ತಿಯನ್ನು ಹೊಂದಿದ ಶ್ರೀಕ್ಷೇತ್ರದಲ್ಲಿ ನೆಲೆ ನಿಂತ ದೇವರ
ಮಹಿಮೆಯಿಂದ ಭಕ್ತರ ಕಷ್ಟ ಕಾರ್ಪಾಣ್ಯಗಳನ್ನು ಬಗೆಹರಿಸಿ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಪ್ರಸಿದ್ದ ಶ್ರದ್ದಾ ಭಕ್ತಿಯ ತಾಣವಾಗಿ ಅಸಂಖ್ಯಾತ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಹಿರಿಯರು ಆರಾಧಿಸಿಕೊಂಡು ಬಂದಿರುವ ದೇವಳವು ಹೆರ್ಗ ವಿಠಲ ಶೆಟ್ಟಿ
ಹಾಗೂ ಅವರ ಪತ್ನಿ ಕಮಲ ವಿ ಶೆಟ್ಟಿ, ಹಾಗೂ ಇವರ ಮಕ್ಕಳು ಮತ್ತು ಕುಟುಂಬಸ್ಥರು ಹಾಗೂ ದೇವಳದ ಗೌರವಾಧ್ಯಕ್ಷ ಮುಂಬಯಿ ಉದ್ಯಮಿ ಎಸ್.ಎಮ್.ಶೆಟ್ಟಿಯವರ ಮುಂದಾಳತ್ವದಲ್ಲಿ ಊರ ಪರವೂರ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಶಿಲಾಮಯ ಗರ್ಭ ಗುಡಿ, ಮೇಲ್ಚಾವಣಿಗೆ
ತಾಮ್ರದ ಹೋದಿಕೆಯೊಂದಿಗೆ ಜೀರ್ಣೋದ್ದಾರ ಗೊಂಡು
ತಾ.29.04.1996 ರಂದು ಬ್ರಹ್ಮಕಲಶೋತ್ಸವದೊಂದಿಗೆ ಪುನರ್ ಪ್ರತಿಷ್ಠಾಪನೆಗೊಂಡಿದೆ. ತಾ 30.10.2015 ರಂದು ದೇವಳದ ಸಮೀಪದಲ್ಲಿ “ಶ್ರೀ ಚಿತ್ತೇರಿ ದುರ್ಗಾಪರಮೇಶ್ವರಿ ಟ್ರಸ್ಟ್” ಆರ್ಡಿ
ವತಿಯಿಂದ ಸುವ್ಯವಸ್ಥಿತ ಅತ್ಯಾಧುನಿಕ ಸೌಲಭ್ಯಗಳ “ಕಮಲ ವಿಠ್ಠಲ ಸಭಾಂಗಣ” ಲೋಕಾರ್ಪಣೆಗೊಂಡಿದೆ.

ಸಾನ್ನಿಧ್ಯಗಳು: ಶ್ರೀ ದುರ್ಗಾಪರಮೇಶ್ವರಿ,
ಸಿದ್ಧಿ ವಿನಾಯಕ, ಚಿತ್ತೇರಿ, ಹೈಗುಳಿ, ಚಿಕ್ಕು,ಕಲ್ಲುಕುಟಿಕ,
ಮಾಸ್ತಿ, ನಾಗದೇವರು, ಹುಲಿ ದೇವರು, ವೀರಭದ್ರ ಹಾಗೂ ಸಪರಿವಾರ ದೇವರ ಸಾನ್ನಿಧ್ಯಗಳಿವೆ.ಕೆಂಡೋತ್ಸವಂದು ಇಲ್ಲಿ
ನಡೆಯುವ ಕಲ್ಲುಕುಟಿಗನ ಕೋಲವು ಹಿಂದಿನಿಂದಲೂ ಬಹಳ ವಿಶೇಷತೆಯನ್ನು ಪಡೆದಿದೆ. ಪುರಾತನ ಕಾಲದಲ್ಲಿ ಮೂಡಿ ಬಂದ ಇಲ್ಲಿನ ಚಿತ್ತೇರಿ ದೇವರ ವಾಲ್ಮೀಕ (ಹುತ್ತ) ಆಳತ್ತೇರಕ್ಕೆ ಬೆಳೆದಿರುವುದು ಇಲ್ಲಿನ ವಿಶೇಷ ಆಕರ್ಷಣೆ.
ಪೂಜಾ ವಿಧಿಗಳು:
ಚಂಡಿಕಾ ಹೋಮ, ದುರ್ಗಾ ನಮಸ್ಕಾರ,
ಮಂಗಳಾರತಿ, ಕುಂಕುಮಾರ್ಚನೆ,
ಹೂವಿನ ಪೂಜೆ,ರಂಗ ಪೂಜೆ,
ಹರಿವಾಣ ನೈವೇದ್ಯ,ಕೆಂಡ ಸೇವೆ,ತುಲಾಭಾರ ಸೇವೆ,ಗಣಹೋಮ, ಸಿಂಹ ಮಾಸದಲ್ಲಿ ಸೋಣೆ ಆರತಿ, ಗಣಶ ಚತುರ್ಥಿ, ವಿಶೇಷ ಪೂಜೆಗಳು, ಪೂಜೆ, ಪ್ರತಿ ವರ್ಷ ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಹಲವಾರು ವರ್ಷಗಳಿಂದ ಸತತ ಭಜನೆ ನಡೆದು ಬಂದಿರುತ್ತದೆ. ಬೆಳಿಗ್ಗೆ ಹಾಗೂ ರಾತ್ರಿ ನಿತ್ಯಪೂಜೆಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

 


ಕಾರ್ಯಕ್ರಮಗಳು: .
ಎ 29 ಕ್ಕೆ ವಾರ್ಷಿಕ ಜಾತ್ರಾ ಮಹೋತ್ಸವ, ಕೆಂಡೋತ್ಸವದ ಪ್ರಯುಕ್ತ ಬೆಳಿಗ್ಗೆ ಗಂ 8 ಕ್ಕೆ ಪುಣ್ಯಾಹ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಗಂ 10 ಕ್ಕೆ ತುಲಾಭಾರ ಸೇವೆಗಳು, ಹರಿವಾಣ ನೈವೇದ್ಯ,
ಮಧ್ಯಾಹ್ನ ಗಂ 12.೦೦ ಕ್ಕೆ
ಮಹಾಪೂಜೆ, ಗಂ 1 ರಿಂದ ಅನ್ನ ಸಂತರ್ಪಣೆ.
ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಿತ್ತೇರಿ ಆರ್ಡಿ ಇವರ ಪ್ರಾಯೋಜಕತ್ವದಲ್ಲಿ ರಾತ್ರಿ ಗಂ 8.30 ರಿಂದ ಗಂ 12 ರ ತನಕ
ಶ್ರೀಕ್ಷೇತ್ರ ಗೋಳಿಗರಡಿ ಮೇಳದವರಿಂದ ಕಾಲಮಿತಿ
ಯಕ್ಷಗಾನ ಬಯಲಾಟ ನಡೆಯಲಿದೆ. ಗಂ 12 ಕ್ಕೆ ಕೆಂಡಸೇವೆ, ಗಂ.1 ಕ್ಕೆ ಕಲ್ಲುಕುಟಿಗನ ಕೋಲ,ದರ್ಶನ, ಗಂ 3 ಕ್ಕೆ ರಂಗಪೂಜೆ, ಎ, 30 ರ ಮುಂಜಾನೆ ಗಂ 5 ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.