ನವದೆಹಲಿ: ಕಳೆದ ತಿಂಗಳಿಡೀ ದೇಶವನ್ನು ಬಹುವಾಗಿ ಕಾಡಿದ ಉಷ್ಣ ಅಲೆ ಇತಿಹಾಸದಲ್ಲೇ ಎರಡನೇ ಗರಿಷ್ಠ ಪ್ರಮಾಣವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಉಷ್ಣ ಅಲೆ ಏಪ್ರಿಲ್ಗೆ ಮುಕ್ತಾಯವಾಗದು, ಮೇ ತಿಂಗಳಲ್ಲೂ ದೇಶದ ವಿವಿಧ ರಾಜ್ಯಗಳನ್ನು ಕಾಡಲಿದೆ ಎಂದು ಎಚ್ಚರಿಕೆ ನೀಡಿದೆ.ದಕ್ಷಿಣ ಭಾರತದಲ್ಲಿ ಏಪ್ರಿಲ್ನಲ್ಲಿ ಸರಾಸರಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು 1901ರ ಬಳಿಕ ಎರಡನೇ ಗರಿಷ್ಠ ತಾಪಮಾನವಾಗಿದೆ. ಅದೇ ರೀತಿ ದೇಶದ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಏಪ್ರಿಲ್ ನಲ್ಲಿ ಸರಾಸರಿ ಕನಿಷ್ಠ ತಾಪಮಾನ (22 ಡಿಗ್ರಿ ಸೆಲ್ಸಿಯಸ್) 1901ರ ಬಳಿಕ ಅತ್ಯಧಿಕವಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ಈ ಕುರಿತು ಬುಧವಾರ ಮಾಹಿತಿ ನೀಡಿರುವ ಭಾರತೀ ಯ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ್ ಮಹಾಪಾತ್ರ, ಏಪ್ರಿಲ್ನಂತೆ ಮೇ ತಿಂಗಳಿನಲ್ಲೂ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನದ ಸಾಧ್ಯತೆಯಿದೆ. ಅಲ್ಲದೆ ಉತ್ತರ ಬಯಲು
ಪ್ರದೇಶಗಳು, ಮಧ್ಯ ಭಾರತದ ಪ್ರದೇಶಗಳು ಮತ್ತು ಕರ್ನಾಟಕ ಸೇರಿದಂತೆ ದ. ಭಾರತದಲ್ಲಿ ಬಿಸಿ ಗಾಳಿಯ ದಿನಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ದಕ್ಷಿಣ ದಕ್ಷಿಣ ರಾಜಸ್ಥಾನ, ಪಶ್ಚಿಮ ಮಧ್ಯ ಪ್ರದೇಶ, ವಿದರ್ಭ, ಮರಾಠವಾಡ ಮತ್ತು ಗುಜರಾತ್ ಪ್ರದೇಶದಲ್ಲಿ ಸುಮಾರು 8-11 ಬಿಸಿ ಗಾಳಿಯ ದಿನಗಳು ಸಂಭವಿಸಬಹುದು. ರಾಜಸ್ಥಾನದ ಉಳಿದ ಭಾಗಗಳು, ಪೂರ್ವ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಛತ್ತೀಸ್ ಗಢದ ಕೆಲವು ಭಾಗಗಳು, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಕರ್ನಾಟಕದ ಉತ್ತರ ಒಳನಾಡು ಮತ್ತು ತೆಲಂಗಾಣಗಳು 5-7 ಉಷ್ಣ ಅಲೆಯ ದಿನಗಳನ್ನು ಕಾಣಬಹುದು ಎಂದು ಅವರು ಹೇಳಿದ್ದಾರೆ
ಸಾಮಾನ್ಯವಾಗಿ, ಉತ್ತರ ಬಯಲು ಪ್ರದೇಶಗಳು, ಮಧ್ಯ ಭಾರತ ಮತ್ತು ದಕ್ಷಿಣ ಭಾರತ ಪ್ರದೇಶಗಳು ಮೇ ತಿಂಗಳಲ್ಲಿ ಸುಮಾರು 3 ದಿನಗಳ ಶಾಖದ ಅಲೆಯನ್ನು ಅನುಭವಿಸುತ್ತವೆ. ಆದರೆ ಅದು ಪ್ರತಿ ಸಲಕ್ಕಿಂತ ಈ ಸಲ ದ್ವಿಗುಣವಾಗಿದೆ.
ಮೇ ತಿಂಗಳಲ್ಲಿ ಗರಿಷ್ಠ ತಾಪಮಾನ :
ಮೇ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಯ ಗರಿಷ್ಠ ಮಟ್ಟಕ್ಕಿಂತ ಅಧಿಕ ತಾಪಮಾನ ಇರಲಿದೆ. ಉತ್ತರದ ಬಯಲು ಪ್ರದೇಶಗಳು ಮತ್ತು ಕೇಂದ್ರೀಯ ಪ್ರದೇಶದಲ್ಲಿ ಬಿಸಿ ಗಾಳಿ ಬೀಸುವ ದಿನಗಳ ಸಂಖ್ಯೆಯೂ ಅಧಿಕವಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಹೇಳಿದೆ.
ದೇಶದ ಪೂರ್ವ, ಈಶಾನ್ಯ ಹಾಗೂ ದಕ್ಷಿಣ ಪ್ರದೇಶಗಳಲ್ಲಿ ಏಪ್ರಿಲ್ನಲ್ಲಿ ಬಿಸಿಗಾಳಿ ಜನರನ್ನು ಹೈರಾಣಾಗಿಸಿದೆ. ಆರೋಗ್ಯ ಸಮಸ್ಯೆಗಳು ಎದುರಾಗುವ ಕುರಿತು ಸರ್ಕಾರ ಜನರಿಗೆ ಎಚ್ಚರಿಕೆ ನೀಡಿತ್ತು. ಹಲವು ರಾಜ್ಯಗಳ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ರದ್ದುಗೊಳಿಸಲಾಗಿತ್ತು. ಈಗ, ಮೇನಲ್ಲಿ ಸಹ ಬಿಸಿಗಾಳಿ ದಿನಗಳು ಎದುರಾಗಲಿವೆ ಎಂಬ ಮುನ್ಸೂಚನೆ ಎಚ್ಚರಿಕೆ ಗಂಟೆಯಾಗಿದೆ.
ಬಿಸಿಗಾಳಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ, ‘ಕರ್ನಾಟಕದ ಉತ್ತರ ಒಳನಾಡು ಮತ್ತು ತೆಲಂಗಾಣದಲ್ಲಿ ಈ ತಿಂಗಳು 5–7 ದಿನಗಳಷ್ಟು ಕಾಲ ಬಿಸಿಗಾಳಿ ಬೀಸಲಿದೆ’ ಎಂದರು.
‘ರಾಜಸ್ಥಾನದ ದಕ್ಷಿಣ ಭಾಗ, ಮಧ್ಯಪ್ರದೇಶದ ಪಶ್ಚಿಮ ಭಾಗ, ಮಹಾರಾಷ್ಟ್ರದ ವಿದರ್ಭ, ಮರಾಠವಾಡ ಹಾಗೂ ಗುಜರಾತ್ನಲ್ಲಿ ಈ ತಿಂಗಳು 8–11 ದಿನಗಳಷ್ಟು ಕಾಲ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
‘ರಾಜಸ್ಥಾನದ ಉಳಿದ ಪ್ರದೇಶಗಳು, ಮಧ್ಯಪ್ರದೇಶದ ಪೂರ್ವಭಾಗ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಛತ್ತೀಸಗಢದ ಕೆಲ ಭಾಗಗಳು, ಪಶ್ಷಿಮ ಬಂಗಾಳ, ಜಾರ್ಖಂಡ್, ಬಿಹಾರದಲ್ಲಿ 5–7 ದಿನಗಳಷ್ಟು ಕಾಲ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ’ ಎಂದೂ ಮಹಾಪಾತ್ರ ತಿಳಿಸಿದರು.
‘ಈಶಾನ್ಯ ಭಾರತದ ಬಹುತೇಕ ಪ್ರದೇಶಗಳು, ದೇಶದ ವಾಯವ್ಯ ಮತ್ತು ಕೇಂದ್ರೀಯ ಭಾಗಗಳಲ್ಲಿ ಸಾಮಾನ್ಯ ಇಲ್ಲವೇ ವಾಡಿಕೆಯ ಗರಿಷ್ಠ ತಾಪಮಾನಕ್ಕಿಂತ ಕಡಿಮೆ ಉಷ್ಣಾಂಶ ಕಂಡುಬರುವ ಸಾಧ್ಯತೆ ಇದೆ’ ಎಂದು ಹೇಳಿದರು.
ದೇಶದ ಪಶ್ಚಿಮ ಭಾಗದಲ್ಲಿ ಕಂಡುಬಂದ ಪ್ರಕ್ಷುಬ್ಧತೆಯಿಂದಾಗಿ ದೇಶದ ಉತ್ತರ ಮತ್ತು ಕೇಂದ್ರೀಯ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಯಿತು. ಇದು ಈ ಪ್ರದೇಶಗಳಲ್ಲಿ ಏಪ್ರಿಲ್ನಲ್ಲಿ ಸ್ವಲ್ಪಮಟ್ಟಿಗೆ ಬಿಸಿಗಾಳಿ ಬೀಸುವುದನ್ನು ತಡೆಯಲು ನೆರವಾಯಿತು ಎಂದು ಹೇಳಿದರು.
‘ಬಂಗಾಳ ಕೊಲ್ಲಿಯ ಪಶ್ಚಿಮ ಕೇಂದ್ರ ಭಾಗ ಹಾಗೂ ದೇಶದ ಪೂರ್ವ ಕರಾವಳಿಯ ಕೆಳಮಟ್ಟದಲ್ಲಿ ಬಹಿರ್ಮುಖಿ ಚಂಡಮಾರುತ ಮುಂದುವರಿದಿತ್ತು. ಚಂಡಮಾರುತದಿಂದ ಕೂಡಿದ ಮಳೆಯೂ ಬಿದ್ದಿಲ್ಲ. ಈ ಪ್ರಾಕೃತಿಕ ವಿದ್ಯಮಾನ, ಏಪ್ರಿಲ್ ತಿಂಗಳಿನಲ್ಲಿ ದೇಶದ ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ದೀರ್ಘಾವಧಿಗೆ ಬಿಸಿಗಾಳಿ ಬೀಸುವುದಕ್ಕೆ ಕಾರಣವಾಗಿತ್ತು’ ಎಂದು ಮಹಾಪಾತ್ರ ವಿವರಿಸಿದರು.
ಕೇಂದ್ರದಲ್ಲಿ ಅಧಿಕ ಒತ್ತಡ ಪ್ರದೇಶವಿದ್ದು, ಸುತ್ತಲೂ ಚಕ್ರಾಕಾರವಾಗಿ ಬೀಸುವ ಮತ್ತು ಸುತ್ತಮುತ್ತಲ ವಿಶಾಲ ಪ್ರದೇಶದಲ್ಲಿ ತಂಪಾದ ಒಣ ಹವೆಯನ್ನು ಉತ್ಪತ್ತಿ ಮಾಡುವ ಮಾರುತಗಳು ಕಂಡುಬರುವ ವಿದ್ಯಮಾನಕ್ಕೆ ಬಹಿರ್ಮುಖಿ ಚಂಡಮಾರುತ (ಆ್ಯಂಟಿ ಸೈಕ್ಲೋನ್) ಎಂದು ಹೇಳಲಾಗುತ್ತದೆ.
ಆ್ಯಂಟಿ ಸೈಕ್ಲೋನ್ ವಿದ್ಯಮಾನವು, ಒಡಿಶಾ ಮತ್ತು ಪಶ್ಚಿಮ ಬಂಗಾಳದತ್ತ ಕಡಲಗಾಳಿ ಬೀಸುವುದರ ಮೇಲೆಯೂ ಪರಿಣಾಮ ಬೀರಿತ್ತು.
ದಕ್ಷಿಣ ಭಾರತದಲ್ಲಿ ಏಪ್ರಿಲ್ನಲ್ಲಿ ಸರಾಸರಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು 1901ರಿಂದ ಈ ವರೆಗೆ ದಾಖಲಾದ ಎರಡನೇ ಗರಿಷ್ಠ ತಾಪಮಾನವಾಗಿದೆ ಎಂದು ಇಲಾಖೆ ಹೇಳಿದೆ.