ಗಾಂಧಿನಗರ: ಗುಜರಾತ್ನ ರಾಜ್ಕೋಟ್ ನಗರದಲ್ಲಿರುವ ಗೇಮಿಂಗ್ ಜೋನ್ ಒಂದರಲ್ಲಿ ಶನಿವಾರ (ಮೇ 25) ಸಂಜೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. 9 ಮಕ್ಕಳು, ಮಹಿಳೆಯರು ಸೇರಿ 32 ಮಂದಿ ಮೃತಪಟ್ಟಿರುವ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಇನ್ನೂ ಹಲವು ಜನ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಗೇಮಿಂಗ್ ಜೋನ್ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್ಪಿ ಗೇಮಿಂಗ್ ಜೋನ್ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿ ದುರಂತ ಸಂಭವಿಸಿದ ಕಾರಣ 32 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ. ಗೇಮಿಂಗ್ ಜೋನ್ನಲ್ಲಿ ಅಗ್ನಿ ದುರಂತ ಸಂಭವಿಸಲು ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿಯನ್ನು ನಂದಿಸಲು ಸಿಬ್ಬಂದಿಯು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದಾಗ್ಯೂ, ಬೆಂಕಿಯಲ್ಲಿ ಎಷ್ಟು ಜನ ಸಿಲುಕಿದ್ದಾರೆ? ಇನ್ನೂ ಎಷ್ಟು ಜನ ಕಾಣೆಯಾಗಿದ್ದಾರೆ ಎಂಬುದರ ಕುರಿತು ನಿಖರ ಮಾಹಿತಿ ದೊರೆತಿಲ್ಲ.
ಎರಡು ಅಂತಸ್ತಿನ ಶೆಡ್ನಲ್ಲಿ ನಿರ್ಮಿಸಲಾಗಿದ್ದ ರಾಜ್ಕೋಟ್ ಗೇಮಿಂಗ್ ಜೋನ್ಗೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಸಿಕ್ಕಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ರಾಜ್ಕೋಟ್ ಮೇಯರ್ ನಯನಾ ಪೆಢಾದಿಯಾ ಅವರೇ ಮಾಹಿತಿ ನೀಡಿದ್ದಾರೆ. “ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಇಲ್ಲದೆಯೇ ಗೇಮಿಂಗ್ ಜೋನ್ ಕಾರ್ಯನಿರ್ವಹಿಸುತ್ತಿದ್ದ ಕುರಿತು ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ರೀತಿಯಾದ ರಾಜಕೀಯ ನುಸುಳದಂತೆ ತನಿಖೆ ನಡೆಸಲಾಗುತ್ತದೆ. ಇದು ಸಣ್ಣ ಸಂಗತಿ ಅಲ್ಲ” ಎಂಬುದಾಗಿ ಮಾಹಿತಿ ನೀಡಿದ್ದಾರೆ.