ಸುವರ್ಣಸೌಧ ಬೆಳಗಾವಿ : ಬೆಳಗಾವಿ ತಾಲ್ಲೂಕಿನ ಯಳ್ಳೂರು ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ ಸುಸಜ್ಜಿತ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಸಿದ್ದವಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದರು.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬುಧುವಾರ ವಿಧಾನಸಭೆ ಕಲಾಪದ ಪ್ರಶ್ನೋತ್ತರ ವೇಳೆ ಶಾಸಕ ಅಭಯ ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಒದಗಿಸುವ ಅನುದಾನದ ಜೊತೆ ರಾಜ್ಯ ಸರ್ಕಾರವು ಅನುದಾನ ನೀಡಿ ಕ್ರೀಡಾಂಗಣ ನಿರ್ಮಿಸಲು ಯಾವುದೆ ಅಡ್ಡಿಯಿಲ್ಲ. ಯಳ್ಳೂರು ಗ್ರಾಮದ ರಿ.ಸ.ನಂ 1142ರ 66 ಎಕರೆ ಪೈಕಿ 40 ಎಕರೆ ಜಮೀನು ಕ್ರೀಡಾ ಇಲಾಖೆ ಹಸ್ತಾಂತರವಾಗಿದೆ. ಪಾರ್ಕಿಂಗ್ ಒಳಗೊಂಡಂತೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಕನಿಷ್ಠ 55 ಎಕರೆ ಜಮೀನಿ ಅವಶ್ಯಕತೆಯಿದೆ. ಈಗಾಗಲೇ ಜಮೀನು ಹಸ್ತಾಂತರ ಪ್ರಕ್ರಿಯೆ ಸಲುವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 11 ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಸ್ಥಳೀಯ ಶಾಸಕರು ಅವಶ್ಯ ಇರುವ 15 ಎಕರೆ ಜಮೀನು ಒದಗಿಸಿದರೆ ಶೀಘ್ರವಾಗಿ ಕ್ರೀಡಾಂಗಣ ನಿರ್ಮಾಣದ ಯೋಜನೆ ರೂಪಿಸಲಾಗುವುದು ಎಂದು ಸಚಿವ ಬಿ.ನಾಗೇಂದ್ರ ಹೇಳಿದರು.

ಸದ್ಯ ಸರ್ಕಾರಿ ಜಮೀನನಲ್ಲಿ ನಿರ್ಮಾಣವಾಗಿರುವ ಶಾಲೆ ಹಾಗೂ ಸರ್ಕಾರದ ಯೋಜನೆಗಳಲ್ಲಿ ಬಡವರಿಗೆ ವಿತರಿಸಲಾಗಿರುವ ಮನೆಗಳನ್ನು ಹೊರತು ಪಡಿಸಿ ಉಳಿದ ಖಾಲಿ ಜಾಗವನ್ನು ಕ್ರೀಡಾ ಇಲಾಖೆ ಹಸ್ತಾಂತರಿಸಲಾಗುವುದು. ಇದಕ್ಕೆ ಜನರ ವಿರೋಧವಿಲ್ಲ ಎಂದು ಶಾಸಕ ಅಭಯ ಪಾಟೀಲ್ ಹೇಳಿದರು.

ತಿಂಗಳ ಒಳಗಾಗಿ ವಿದ್ಯಾರ್ಥಿ ನಿಲಯ ಮಂಜೂರಾತಿ: ಹೊಸಕೋಟೆಯಲ್ಲಿ ಮೆಟ್ರಿಕ್ ನಂತರ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಅಗತ್ಯ ಇರುವ 10000 ಚದುರ ಅಡಿ ಜಾಗವನ್ನು ಒದಗಿಸಿದರೆ, ತಿಂಗಳ ಒಳಗಾಗಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಮಂಜೂರಾತಿ ನೀಡುವುದಾಗಿ ಸಚಿವ ಬಿ.ನಾಗೇಂದ್ರ ಶಾಸಕ ಶರತ್ ಬಚ್ಚೇಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.