ಇಲ್ಲೊಂದು ಸ್ವರ್ಗವಿದೆ .......

ಇಲ್ಲೊಂದು ಸ್ವರ್ಗವಿದೆ .......
Udayaprabha Latest Breaking News Download App
Udayaprabha Latest Breaking News Download App
Udayaprabha Latest Breaking News Download App

ನನಗೆ ಬೆಂಗಳೂರಿನ ಈ ಬಾಡಿಗೆ ಮನೆಯಲ್ಲಿ ಬಸಳೆ ಸೊಪ್ಪು ಮಾಡುವಾಗಲೆಲ್ಲ ಅಮ್ಮ ತುಸು ಹೆಚ್ಚೆ ನೆನಪಾಗುತ್ತಾಳೆ, ಆಕೆಗೆ ಬಸಳೆ ಮೇಲಿನ ಭಕ್ತಿ, ಅದರ ಮೇಲಿನ ಪ್ರೀತಿ,ಅದರ‌ ಮೇಲಿನ ಕಕ್ಕುಲತೆ ತನ್ನ ಮತ್ತೆ ಮತ್ತೆ ಕಾಡುತ್ತದೆ, ಬಸಳೆಯೆಂದರೆ ಆಕೆಯ ಬದುಕಿನ ಭಾಗ, ಆಕೆ ಅದರಲ್ಲೆ ಬದುಕನ್ನು ಕಂಡವಳು, ಕಾಣುವವಳು..

ನನ್ನಮ್ಮ ರುಚಿಯಾದ ಅಡುಗೆ ಮಾಡುವವಳಲ್ಲ, ಆಕೆಗೆ ಅಡುಗೆಯೆಂದರೆ ಒಂದು ಕೆಲಸ ಮಾಡಬೇಕು ಅಷ್ಟೇ, ಅದನ್ನು ಭಕ್ತಿಯೆನ್ನುವ ರೀತಿಯಲ್ಲಾಗಲಿ, ಅದನ್ನು ಹೊಗಳಬೇಕು, ಅದನ್ನು ಸವಿದವರು ಆಹಾ ಎನ್ನಬೇಕು ಎನ್ನುವ ಯಾವ ಹಂಬಲವೂ ಇಲ್ಲದೆ ಊಟಕ್ಕೆ ಅನ್ನದ ಜೊತೆ ಪಕ್ಕದಲ್ಲಿ ನಂಜಲು ಇರಲಿ ಎನ್ನುವಂತೆ ಏನಾದರೂ ಒಂದು ಬಗೆಯ ತರಕಾರಿಯ ಕೊಚ್ಚಿ ಅದಕ್ಕೆ ರುಚಿಗೆ ಅನುಗುಣವಾಗಿ ಉಪ್ಪು, ಖಾರ ಹುಳಿ ಹಾಕುವವಳು ಅವಳು, ಹಾಗಂತ ಯಾರೂ ಕೂಡ ಅಮ್ಮನ ಅಡುಗೆ ರುಚಿಯಾಗಿಲ್ಲವೆಂದೊ, ಇಲ್ಲಾ ಇದಯ ಎಂತಹ ಪದಾರ್ಥ ಎಂದು ತಿರಸ್ಕರಿಸಿದ್ದೂ ಇಲ್ಲ..
ಹಾಗಂತ ಅವಳ ಅಡುಗೆ ರುಚಿಯೆಂದಲ್ಲ ಅದನ್ನು ಉಪೇಕ್ಷೆ ಮಾಡುವಂತಿಲ್ಲ ಅಂದೆನಷ್ಟೆ..

ಮೊದಲೇ ಹೇಳಿದಂತೆ ನನ್ನಮ್ಮನ ಅಡುಗೆಗಿಂತ ಈ ತರಕಾರಿ ಗಿಡಗಳ ಪೋಷಣೆಯ ಭಕ್ತಿ ಮಹತ್ವದ್ದು, ಅದರಲ್ಲೂ ಬಸಳೆ ಪ್ರೀತಿ..

ಅಮ್ಮನಿಗೆ ಪ್ರತಿ ವರ್ಷ ಏನೂ ಮಾಡಿಲ್ಲವೆಂದರೂ ಬಸಳೆ ನಡಲೆಬೇಕು,ಅದಕ್ಕೊಂದು ಚಪ್ಪರ, ಅದಕ್ಕೆ ಸಳ್ಳೆ ಸೊಪ್ಪಿನ ಗೊಬ್ಬರ ಹಾಕಿ ಒಂದಿಡಿ ಚಪ್ಪರ ಹಬ್ಬಿ ಅದು ಅದರಾಚೆ ಹೊರಡುವಾಗ ಅದನ್ನು ಕೊಯ್ದು ಅಡುಗೆ ಮಾಡಬೇಕು, ಆ ಬಸಳೆ ದಂಟನ್ನು ಇಷ್ಟಪಟ್ಟು ಸವಿಯಬೇಕು..

ಇದು ನನಗೆ ಬುದ್ದಿ ಬಂದ ದಿನದಿಂದ ಇಂದಿನವರೆಗೂ ನಡೆಯುತ್ತಲೇ ಬಂದಿರುವ ಪ್ರಕ್ರಿಯೆ, ಬಹುಶಃ ಅಮ್ಮನ ಬದುಕಿನ ಬಹುವಾಗದಲ್ಲಿ ಒಂದು ಗಂಟಿ(ದನ) ಇನ್ನೊಂದು ಬಸಳೆ, ಅಮ್ಮ ತನ್ನ ಮಕ್ಕಳಿಗೆ ನನ್ನನ್ನು ಸೇರಿದಂತೆ ಹೊಡೆದು ಬಡಿದು, ಊರಿಡಿ ರಂಪ ಮಾಡಿದ್ದಾಳೆ, ಅದೇ ಇವೆರಡು ವಿಷಯಗಳಲ್ಲಿ ಆಕೆ ಎಂದೂ ಸಂಯಮ ಕಳೆದುಕೊಳ್ಳುವುದಾಗಲಿ, ಅವುಗಳನ್ನು ದೂರಿದ್ದಾಗಲಿ ನಾ ಕಂಡಿಲ್ಲ ಅಂತಹ ಮಮತೆ ಅವಳ ಬಗ್ಗೆ..

ನನ್ನಮ್ಮನಿಗೆ ವರ್ಷದ ಅದ್ಯಾವುದೊ ದಿನ ಮಣ್ಣನ್ನು ಅಗೆದು ಮೊದಲೆ ಸಿದ್ದ ಪಡಿಸಿದ್ದ ಕುಣೆಯಲ್ಲಿ ಬಸಳೆಯನ್ನು ನೆಡಬೇಕು, ಅದನ್ನು ಮುಚ್ಚಲು ಸಳ್ಳೆ ಸೊಪ್ಪು ಇಟ್ಟು ಬಂದರೆ ಆಕೆಯ ವ್ರತ ಶುರುವಾದ ಹಾಗೆ, ಅದಕ್ಕೆ ನಿತ್ಯ‌ ನೀರು ಹಾಕುವುದು, ಅದಕ್ಕೆ ಹಬ್ಬಲು  support ಗಿಡಗಳ ಕೊಡುವುದು, ಅದು ಸ್ವಲ್ಪ ಚಿಗುರಲು ಶುರುವಾದ ಮೇಲೆ, ಅದಕ್ಕೊಂದು ಚಪ್ಪರ ಹಾಕಿಸೊದು ಆಕೆಯ ಬಸಳೆ ಪ್ರಣಾಳಿಕೆಯ ಮುಖ್ಯ ಅಂಶಗಳು, ಅಮ್ಮನ ಬಸಳೆ ಚಪ್ಪರಕ್ಕೆ ತನ್ನದೇ ಆದ ಮಹತ್ವವಿದೆ.. ಅದರಲ್ಲಿ ಆಕೆಯ ಖುಷಿಯಿದೆ..

ಬಸಳೆ ಮೊದಲ ಕೊಯ್ಲು ಅಮ್ಮನಿಗೆ ಬಹುಮುಖ್ಯ, ಅದ್ಯಾವುದೊ ಚಿಗುರನ್ನೆ ಕೊಯ್ದು ಅದರ ಮೂಲವನ್ನು ಹಾಗೆ ಬೆಳೆಯಲು ಬಿಟ್ಟು ಅದನ್ನು ಮುಂದಿನ ವರ್ಷಕ್ಕೆ ಬೀಜವಾಗಿ ಇಟ್ಟು ಅದರ ವಂಶವೃಕ್ಷ ಸಾಕುವ ಅಮ್ಮನ ಗುಟ್ಟು ಮಾತ್ರ ವಿಶೇಷ.. ಅದನ್ನು ಮಳೆಗಾಲದಲ್ಲಿ ಅಲ್ಲೊಲ್ಲೊ ಮರದ ಬುಡದಲ್ಲಿ ಇಟ್ಟು ಅದನ್ನು ಉಳಿಸಿಕೊಳ್ಳುವ ಸಾಹಸಿ ಅವಳು..

ಬಸಳೆಯನ್ನು ಅಮ್ಮ ಆಗೀಗೊಮ್ಮೆ ಮಾರಾಟ ಮಾಡಿದಿದೆ, ಅದೂ ಅದನ್ನು ಕತ್ತರಿಸಿ ಸುತ್ತಿ ಆಚೀಚಿ ಮನೆಗೆ ಕೊಡುವುದಷ್ಟೆ..
ಒಂದೈದು ರೂಪಾಯಿಗೆ..

ಈ ಬಸಳೆಯನ್ನು ಅಮ್ಮ ಹಲವಾರು  ಸಾರಿ ಮನೆಗೆ ಬಂದವರಿಗೆ ಉಡುಗೊರೆ ಆಗಿ ಕೊಟ್ಟಿದ್ದಿದೆ, ಕೆಲವರು ಸಾರಿಗೆ ಬಸಳೆಯ ಕೇಳಿ ಬರುವುದೂ ಇದೆ, ಅಮ್ಮ ಯಾವತ್ತೂ ಇಲ್ಲ ಅಂದಿದ್ದು ನನಗೆ ನೆನಪಿಲ್ಲ, ಅವಳಿಗೆ ಅದು ಒಂತರ ಪ್ರತಿಷ್ಠೆಯ ವಸ್ತು, ಕೊಟ್ಟಷ್ಟು ಸನ್ಮಾನದ ಭಾವ..

ಅಮ್ಮನ ಬಸಳೆ ಪ್ರೀತಿಯಲ್ಲಿ ನಾವು ಮಾತ್ರ ರೋಸೊ ಹೋಗಿದ್ದು ಬಹಳಿದೆ, ಅವಳು ವಾರಗಟ್ಟಲೆ ಅದನ್ನೆ ಕೊಯ್ದು ಸಾರು ಮಾಡಿದರೆ ಬೇಸರ ಬರಲೇ ಬೇಕಲ್ಲವೆ..ಅದು ಅಮ್ಮನ ಅನಿವಾರ್ಯತೆ ಆಗಿದ್ದರೂ ನಮಗೆ ತಿನ್ನಲೇ ಬೇಕಾದ ಸನ್ನವೇಶ ನಿರ್ಮಿಸೊದು ಬೇಸರ..

ಅಲ್ಲಿಂದ ಇಲ್ಲಿಗೆ ಬಂದ ಮೇಲೆ..

ಇಲ್ಲಿ ಸಿಗುವ ಬಸಳೆಯ ಕಂಡಾಗಲೆಲ್ಲ ಅಮ್ಮನ ಬಸಳೆ ಚಪ್ಪರ, ಆ ದಪ್ಪ ಎಲೆಗಳು, ಆ ದಂಟಿನ ಗಾತ್ರ ನೆನನೆನಪಾಗಿ ಇಲ್ಲಿನ ವ್ಯಾಪಾರ ಮನೋಧರ್ಮದಲ್ಲಿ ಆ ಪ್ರೀತಿಯ ಕೊರತೆ ಕಾಣೆಯಾಗಿ, ಅದೊಂದು ಸಾಧಾರಣ ಸೋಪ್ಪು ಎನಿಸ ತೊಡಗುತ್ತದೆ, ಇಷ್ಟವಾದರೆ ಬಳಸಿ ಇಲ್ಲ ಬಿಸಾಡಿ, ಅಷ್ಟೇ..

ಇಲ್ಲಿನ ಬಸಳೆಯಲ್ಲಿ ಆ ಚಪ್ಪರದ ಅಪ್ಪುಗೆಯಿಲ್ಲ,
ನಮ್ಮೂರಲ್ಲಿ ಹಬ್ಬಿ ಬೆಳೆದು ಓಡಾಡುವ ಪ್ರೀತಿಯಿಲ್ಲ
ಇತರರಿಗೆ ತಿನಿಸುವ ಅಕ್ಕರೆಯೂ ಇಲ್ಲ..
ಹೆಚ್ಚಾಗಿ.. ಅಮ್ಮ ನೆಟ್ಟು, ಅಮ್ಮ ಮಾಡಿದ ಅಡುಗೆಯಷ್ಟು ಸ್ವಾಧವಿಲ್ಲ..

ಅಮ್ಮನ ಅಡುಗೆಗಿಂತ ಅಮ್ಮನ ಬಸಳೆಯ ಪ್ರೀತಿ ಇನ್ನೂ ಹತ್ತಾರು ವಿಷಯಗಳ ಬರೆಯಲು ಪ್ರೇರೆಪಿಸುತ್ತದೆ, ಇನ್ನೊಮ್ಮೆ ಅದನ್ನು ಬರೆಯುವ ಬಯಕೆ ನನ್ನದು..

ಅಂದ ಹಾಗೆ ಇಂದಿನ ಬಸಳೆ ಸೊಪ್ಪಿನಲ್ಲಿ ಬರೇ ಹೂಗಳಿದ್ದವು, ಅಮ್ಮ ಬಸಳೆಯಲ್ಲಿ ಹೂವಾಗಲು ಬಿಡುವುದೆ ಇಲ್ಲ, ಬಸಿಲಾದರೂ ಅದನ್ನು ಮುರಿದು ತೆಗೆಯುವವಳು ಅವಳು..

ಆ ಭಕ್ತಿಯೇ ಆ ಚೆಂದದ ಚಪ್ಪರದ ಹೂರಣ..

ಪ್ರಕಾಶ ಆವರ್ಸೆ