ಹುಬ್ಬಳ್ಳಿ:
1992ರ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಶ್ರೀಕಾಂತ ಪೂಜಾರಿ ಅವರ ಬಂಧನ ಖಂಡಿಸಿ ನಗರದ ಶಹರ ಪೊಲೀಸ್‌ ಠಾಣೆ ಎದುರು ಧರಣಿ ನಡೆಸಿದ್ದ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು, ಡಿಸಿಪಿ ರಾಜೀವ್‌ ಎಂ. ಅವರು ಭರವಸೆ ನೀಡಿದ ಬಳಿಕ ಧರಣಿ ವಾಪಸ್‌ ಪಡೆದರು.

ಡಿಸಿಪಿ ರಾಜೀವ್‌ ಎಂ. ಅವರು ಪೊಲೀಸ್‌ ಅಧಿಕಾರಿಗಳ ಜೊತೆ ಸೇರಿ ಪ್ರತಿಭಟನಕಾರರ ಮನವೊಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1992ರ ಗಲಭೆ ಪ್ರಕರಣದಲ್ಲಿ ಭಾಗಿಯಾದವರ ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿ ಇನ್‌ಸ್ಪೆಕ್ಟರ್‌ ಅವರು ಆರೋಪಿ ಬಂಧನಕ್ಕೆ ಮೊದಲು ವಾರಂಟ್ ನೀಡದ ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ಆಂತರಿಕ ತನಿಖೆ ನಡೆಸುತ್ತೇವೆ. ಕ್ರಮ ತಪ್ಪಾಗಿದ್ದರೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. ಕೆಲವು ಪ್ರಕರಣದಲ್ಲಿ ಅಧಿಕಾರಿಗಳು ವಿವೇಚನೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ಹೆಜ್ಜೆ ಇಡುತ್ತೇವೆ ಎಂದು ತಿಳಿಸಿದರು.

ಆರೋಪಿಯನ್ನು ಬಂಧಿಸಿರುವ ಸಂದರ್ಭ ತಪ್ಪಾಗಿತ್ತು ಎಂದು ಇನ್‌ಸ್ಪೆಕ್ಟರ್ ಹೇಳಿರುವುದಾಗಿ ಡಿಸಿಪಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿ ಹಿಂಪಡೆದಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಸಂಜಯ್ ಬಡಸ್ಕರ್ ತಿಳಿಸಿದರು.