ಕನ್ಯಾಕುಮಾರಿ : ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿ ಧ್ಯಾನ ಆರಂಭಿಸಿದ್ದಾರೆ. ಗುರುವಾರ ಸಂಜೆಯಿಂದಲೇ ಕನ್ಯಾಕುಮಾರಿಯ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ಧ್ಯಾನ ನಿರತದ್ದಾರೆ. ಪ್ರಧಾನಿ ಮೋದಿ ಕನ್ಯಾಕುಮಾರಿಗೆ ಬಂದಿಳಿಯುತ್ತಿದ್ದಂತೆ ಅವರ ಹಳೆಯ ಫೊಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 1991ರಲ್ಲಿ ನರೇಂದ್ರ ಮೋದಿ, ಅಂದಿನ ಬಿಜೆಪಿ ನಾಯಕ ಮುರಳಿ ಮನೋಹರ್‌ ಜೋಷಿ ಕನ್ಯಾಕುಮಾರಿಗೆ ಭೇಟಿ ನೀಡಿದ್ದ ಫೋಟೋ ವೈರಲ್‌ ಆಗಿದೆ.

ಈ 33 ವರ್ಷ ಹಳೆಯದಾದ ಈ ಅದ್ಭುತ ಚಿತ್ರಕ್ಕೆ ನೆಟ್ಟಿಗರಿಂದ ನಾನಾ ರೀತಿಯ ಕಮೆಂಟ್‌ಗಳು ಬಂದಿವೆ. ಡಿ. 11, 1991 ರಂದು ಬಿಜೆಪಿ ಕೈಗೊಂಡಿದ್ದ ಏಕತಾ ಯಾತ್ರೆ ಕನ್ಯಾಕುಮಾರಿಯಿಂದ ಶುರುವಾಗಿ ಕಾಶ್ಮೀರದಲ್ಲಿ ಮುಕ್ತಾಗೊಂಡಿತ್ತು. ಈ ಯಾತ್ರೆಯಲ್ಲಿ ನರೇಂದ್ರ ಮೋದಿ, ಮುರಳಿ ಮನೋಹರ್‌ ಜೋಷಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವಿವೇಕಾನಂದ ಪ್ರತಿಮೆ ಎದುರು ನಿಂತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಭಯೋತ್ಪಾದನೆ ವಿರುದ್ಧ ಭಾರತ ಬಲಿಷ್ಟವಾಗಿ ನಿಂತಿದೆ ಎಂಬ ಸಂದೇಶವನ್ನು ಪ್ರಪಂಚಕ್ಕೆ ಸಾರುವ ಉದ್ದೇಶದಿಂದ ಬಿಜೆಪಿ ಡಿ. 11, 1991 ರಂದು ಏಕತಾ ಯಾತ್ರೆಯನ್ನು ಆರಂಭಿಸಿತ್ತು. ಈ ಯಾತ್ರೆ ಜ. 26, 1992ರಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸಮಾಪ್ತಿಯಾಗಿತ್ತು. ಈ ಯಾತ್ರೆಯೂ ಸುಮಾರು 14 ರಾಜ್ಯಗಳಲ್ಲಿ ಸಾಗಿ, ಜನರಲ್ಲಿ ಜಾಗೃತಿ ಮೂಡಿಸಿತ್ತು