ಹುಬ್ಬಳ್ಳಿ: ನಗರದಲ್ಲಿ 5 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ಬಿಹಾರ ಮೂಲದ ಆರೋಪಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಐದು ವರ್ಷದ ಬಾಲಕಿಯ ಕೊಲೆ ಪ್ರಕರಣದ ಆರೋಪಿ ಪತ್ತೆಗಾಗಿ ಬಂಧಿಸಲು ಹುಬ್ಬಳ್ಳಿ ಪೊಲೀಸರು ಹಲವು ತಂಡಗಳನ್ನು ರಚಿಸಿದ್ದರು. ಆರೋಪಿ ಬಿಹಾರ ಮೂಲದ ರಿತೇಶಕುಮಾರ ಎನ್ನಲಾಗಿದ್ದು, ಈತ ಇರುವ ಜಾಗ ಪತ್ತೆಯಾದ ನಂತರ ಆತನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಆದರೆ, ಆರೋಪಿ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದು, ಈ ವೇಳೆ ಗುಂಡು ಆರೋಪಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಕಾಲು ಮತ್ತು ಎದೆಯ ಭಾಗಕ್ಕೆ ಬುಲೆಟ್‌ ತಗುಲಿದ್ದರಿಂದ ಆರೋಪಿ ಕುಸಿದುಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಒಯ್ಯಲಾಯಿತು. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಹುಬ್ಬಳ್ಳಿಯ ವಿಜಯನಗರದಲ್ಲಿನ ಮನೆಯೊಂದರ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಮೃತ ಆರೋಪಿ ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದಿದ್ದಾನೆ. ಆರೋಪಿ ರಿತೇಶಕುಮಾರ ಬಾಲಕಿಯನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಾಲಕಿಯ ತಂದೆ ಕೆಲಸಕ್ಕೆ ಹೋಗಿದ್ದರು. ಬಾಲಕಿ ತಾಯಿ ಮನೆಯೊಳಗೆ ಕೆಲಸ ಮಾಡುತ್ತಿದ್ದಳು. ಈ ವೇಳೆ ಮಗು ಮನೆಯ ಹೊರೆಗೆ ಮಗು ಆಟವಾಡುತ್ತಿತ್ತು. ಇದನ್ನು ಗಮನಿಸಿದ ಆರೋಪಿ ಚಾಕೋಲೆಟ್ ಆಸೆ ತೋರಿಸಿ ಬಾಲಕಿಯನ್ನು ಅಪಹರಿಸಿದ್ದ. ಆರೋಪಿಯ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಗಳು ಕಾಣೆಯಾಗಿದ್ದಾಳೆಂದು ತಾಯಿಗೆ ತಿಳಿದಾಗ, ಆಕೆ ಸ್ಥಳೀಯರೊಂದಿಗೆ ಸೇರಿ ಆಕೆಗಾಗಿ ಹುಡುಕಾಟ ಆರಂಭಿಸಿದರು. ನಿರ್ಮಾಣ ಹಂತದ ಕಟ್ಟಡದ ಬಳಕೆಯಾಗದ ಶೌಚಾಲಯದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.
ಬಾಲಕಿಯ ಪೋಷಕರು ಕೊಪ್ಪಳದವರಾಗಿದ್ದು, ಪೇಂಟಿಂಗ್ ಕೆಲಸಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದರು.

ಘಟನೆ ಖಂಡಿಸಿ ಅಶೋಕ್ ನಗರ ಪೊಲೀಸ್ ಠಾಣೆಯ ಮುಂದೆ ಸ್ಥಳೀಯರಿಂದ ಬೃಹತ್ ಪ್ರತಿಭಟನೆ ನಡೆದಿತ್ತು. ಇದರ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆತನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ, ಈ ವೇಳೆ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ನಂತರ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡುಹಾರಿಸಿದಾಗ ಗಂಬೀರವಾಗಿ ಗಾಯಗೊಂಡ ಆರೋಪಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.