ರೇವಾ (ಮಧ್ಯಪ್ರದೇಶ): 2 ದಿನದ ಹಿಂದೆ ಇಲ್ಲಿಯ ತೆರೆದ ಕೊಳವೆಬಾವಿಗೆ ಬಿದ್ದಿದ್ದ 6 ವರ್ಷದ ಬಾಲಕ ವಿವಿಧ ರಕ್ಷಣಾ ಸಂಸ್ಥೆಗಳ ಪ್ರಯತ್ನದ ಹೊರತಾಗಿಯೂ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಮನಿಕಾ ಗ್ರಾಮದಲ್ಲಿ ಶುಕ್ರವಾರ ಮಾಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಬಾಲಕ ಆಟ ಆಡುತ್ತಿದ್ದಾಗ 40 ಅಡಿ ಆಳಕ್ಕೆ ತೆರೆದ ಕೊಳವೆಬಾವಿಯಲ್ಲಿ ಬಿದ್ದಿದ್ದ. ಬಾಲಕನ ರಕ್ಷಣೆಗೆ ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯೆ ಪಡೆ (ಎಸ್ಡಿಇಆರ್.ಎಫ್), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಮತ್ತು ಸ್ಥಳೀಯ ಆಡಳಿತ ಕಾರ್ಯಾಚರಣೆ ನಡೆಸಿದವು. 70 ಅಡಿಯ ಕೊಳವೆಬಾವಿಯಲ್ಲಿ ಬಾಲಕನಿಗೆ ರಕ್ಷಣಾ ಪಡೆಗಳು ಆಮ್ಲಜನಕ ಪೂರೈಸಿದವು. ಬಾಲಕನ ರಕ್ಷಣೆಗೆ ಸಮಾನಾಂತರ ಹೊಂಡಗಳನ್ನು ನಿರ್ಮಿಸಿ ಕಾರ್ಯಾಚರಣೆ ನಡೆಸಲಾಗಿತ್ತು. 40 ಗಂಟೆ ಸುದೀರ್ಘ ಕಾರ್ಯಾ ಚರಣೆಯ ನಂತರ ಭಾನುವಾರ ಬೆಳಿಗ್ಗೆ 8 ಗಂಟೆಗೆ ರಕ್ಷಣಾ ಪಡೆಗಳು ಬಾಲಕನನ್ನು ತಲುಪಿದವು. ಆದರೆ ಆತ ಪ್ರತಿಕ್ರಿಯೆ ನೀಡಲಿಲ್ಲ. ಕೊಳವೆಬಾವಿ ತುಂಬಾ ಕಿರಿದಾದ್ದರಿಂದ ಬಾಲಕನ ರಕ್ಷಣೆಗೆ ಸಾಧ್ಯವಾಗಲಿಲ್ಲ ಎಂದು ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಹೇಳಿದ್ದಾರೆ.