ಬೆಳಗಾವಿ: ಸಮೀಪದ ಯಮನಾಪುರ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘದ ಹೆಸರಿನಲ್ಲಿ ವಂಚಿಸಿರುವ ಬಗ್ಗೆ ಮಾಳಮಾರುತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇದೀಗ ತನಿಖೆ ಆರಂಭಿಸಿದ್ದಾರೆ. ಈ ಸಂಘದ ಹೆಸರಿನಲ್ಲಿ ಸುಮಾರು 7,707 ಮಹಿಳೆಯರಿಂದ 19,35,35,636 ರೂ. ಸಾಲ ಮಾಡಿಸಿ ವಂಚಿಸಲಾಗಿದ್ದು ಈ ಸಂಬಂಧ ನಾಲ್ವರ ಮೇಲೆ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಮನಾಪುರದ ಅಶ್ವಿನಿ ಹೊಳೆಪ್ಪ ದಡ್ಡಿ, ಆಕೆಯ ಪತಿ ಹೊಳೆಪ್ಪ ಫಕೀರಪ್ಪ ದಡ್ಡಿ, ಮಕ್ಕಳಾದ ಸೇವಂತಾ ಹೊಳೆಪ್ಪ ದಡ್ಡಿ, ಪ್ರಿಯಾಂಕಾ ಹೊಳೆಪ್ಪ ದಡ್ಡಿ ವಿರುದ್ಧ ದೂರು ದಾಖಲಾಗಿದೆ. ಸೋನಟ್ಟಿ ಗ್ರಾಮದ ಶೇಖ ಕನ್ನಪ್ಪ ಹಂಚಿಮನಿ ಎಂಬ ಮಹಿಳೆ ದೂರು ನೀಡಿದ್ದು ಯಮನಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಹಿಳೆಯರಿಗೆ ಸಾಲ ತೆಗೆದುಕೊಡಿ, ಸಬ್ಸಿಡಿ ಮಾಡಿಸಿ ನಿಮ್ಮ ಸಾಲದ ಎಲ್ಲಾ ಕಂತು ನಾವೇ ತುಂಬುತ್ತೇವೆ ಎಂದು ಮಹಿಳೆಯರಿಂದ ಇವರು ಹಣ ಪಡೆದುಕೊಂಡಿದ್ದಾರೆ.
ಹಲವು ವರ್ಷಗಳಿಂದ ಮಹಿಳೆಯರಿಂದ ಸಾಲ ಮಾಡಿಸಿ ಕಂತು ತುಂಬುವುದಾಗಿ ಹೇಳಿ ಇದುವರೆಗೂ ಯಾವ ಕಂತು ತುಂಬಿಲ್ಲ.ವಂಚನೆಗೊಳಗಾದ ಮಹಿಳೆಯರಿಗೆ ಇದೀಗ ಕೆಲವು ತಿಂಗಳುಗಳಿಂದ ಫೈನಾನ್ಸ್ ನವರು ಹಣ ತುಂಬುವಂತೆ ಕಿರುಕುಳ ನೀಡುತ್ತಿದ್ದಾರೆ. ನಮ್ಮಿಂದ ಹಣ ಪಡೆದಿರುವ ಹೊಳೆಪ್ಪ ದಡ್ಡಿ, ಆತನ ಪತ್ನಿ, ಮಕ್ಕಳು ಮೋಸ ಮಾಡಿದ್ದಾರೆ ಎಂದು ಅವರು ದೂರಿದ್ದು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.