ಕೋಯಿಕ್ಕೋಡ್: ವಯನಾಡ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಲ್ತಾನ್ ಬತೇರಿ ಎಂಬ ಪಟ್ಟಣದ ಹೆಸರನ್ನು ಗಣಪತಿವಟ್ಟಂ ಎಂದು ಬದಲಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಗುರುವಾರ ಆಗ್ರಹಿಸಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಅವರು, ‘ಎರಡು ಶತಮಾನಗಳ ಹಿಂದೆ ಮಲಬಾರ್ ಪ್ರಾಂತ್ಯದಲ್ಲಿ ಮೈಸೂರು ಸಂಸ್ಥಾನದ ಆಳ್ವಿಕೆ ಸಂದರ್ಭದಲ್ಲಿ ಈ ಪಟ್ಟಣಕ್ಕೆ ಗಣಪತಿವಟ್ಟಂ ಎಂಬ ಹೆಸರಿತ್ತು. ಆದರೆ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಈ ಹೆಸರನ್ನು ಸುಲ್ತಾನ್ ಬತೇರಿ ಎಂದು ಬದಲಿಸಲಾಗಿತ್ತು. ಅದನ್ನು ಮೂಲ ಹೆಸರಿಗೆ ಬದಲಿಸುವುದು ಇಂದಿನ ಅಗತ್ಯ’ ಎಂದಿದ್ದಾರೆ.
ವಯನಾಡ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಮತ್ತು ಎಲ್ಡಿಎಫ್ ಅಭ್ಯರ್ಥಿ ಅನ್ನೀ ರಾಜಾ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ‘ಈ ನಾಯಕರು ಈ ಪ್ರದೇಶವನ್ನು ಸುಲ್ತಾನ್ ಬತೇರಿ ಎಂದೇ ಕರೆಯಲು ಬಯಸುತ್ತಾರೆ. ವಯನಾಡ್ ಪ್ರದೇಶಕ್ಕೆ ಟಿಪ್ಪು ಕೊಡುಗೆ ಏನು? ಯಾವ ಉದ್ದೇಶಕ್ಕಾಗಿ ಆ ಹೆಸರನ್ನು ಹಾಗೇ ಉಳಿಸಿಕೊಳ್ಳಬೇಕು?’ ಎಂದು ಪ್ರಶ್ನಿಸಿದ್ದಾರೆ.
‘ಗಣಪತಿವಟ್ಟಂ ಎಂಬ ಹೆಸರು ಈ ಪಟ್ಟಣಕ್ಕೆ ಇದ್ದ ವಿಚಾರ ಬಹುತೇಕರಿಗೆ ತಿಳಿದಿದೆ. ಕಾಂಗ್ರೆಸ್ ಮತ್ತು ಎಲ್ಡಿಎಫ್ ನಾಯಕರು ಟಿಪ್ಪು ಜೊತೆ ಗುರುತಿಸಿಕೊಳಲು ಬಯಸುತ್ತಾರೆ. ಕೇರಳದಲ್ಲಿ ಲಕ್ಷಗಟ್ಟಲೆ ಜನರನ್ನು ಇಸ್ಲಾಂಗೆ ಮತಾಂತರ ಮಾಡಿದವನು ಟಿಪ್ಪು. ಅದರಲ್ಲೂ ವಯನಾಡ್ ಮತ್ತು ಮಲಬಾರ್ ಪ್ರಾಂತ್ಯದಲ್ಲಿ ಇದು ವ್ಯಾಪಕವಾಗಿ ನಡೆದಿತ್ತು’ ಎಂದು ಆರೋಪಿಸಿದ್ದಾರೆ.
ಸುಲ್ತಾನ್ ಬತೇರಿಗೆ ಗಣಪತಿವಟ್ಟಂ ಎಂಬ ಹೆಸರಿತ್ತು ಎಂಬ ಸಂಗತಿಯನ್ನು ಮೊದಲ ಬಾರಿಗೆ 1984ರಲ್ಲಿ ಪ್ರಸ್ತಾಪಿಸಿದ್ದು ಬಿಜೆಪಿ ಮುಖಂಡ ದಿ. ಪ್ರಮೋದ್ ಮಹಾಜನ್.
ಈ ಪ್ರದೇಶ ಕುರಿತು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದ ಪುಸ್ತಕದಲ್ಲಿ, ‘ಮಲಬಾರ್ ಪ್ರಾಂತ್ಯವನ್ನು ವಶಪಡಿಸಿಕೊಂಡ ಟಿಪ್ಪು ಸುಲ್ತಾನ್, ಇಲ್ಲಿನ ಜೈನ ದೇವಾಲಯದಲ್ಲಿ ಶಸ್ತ್ರಾಸ್ತ್ರ ದಾಸ್ತಾನು ಮಾಡಿದ್ದ. ಹೀಗಾಗಿ ಇದನ್ನು ‘ಸುಲ್ತಾನ್ಸ್ ಬ್ಯಾಟರಿ’ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಇದು ಸುಲ್ತಾನ್ ಬತೇರಿ ಎಂದು ರೂಢಿಗತವಾಯಿತು. ಟಿಪ್ಪು ಇಲ್ಲಿ ಕೋಟೆಯೊಂದನ್ನು ಕಟ್ಟಿಸಿದ್ದಾನೆ. ಅಲ್ಲಿ ಇಂದು ಪೊಲೀಸ್ ಠಾಣೆ ಇದೆ’ ಎಂದು ನಮೂದಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಸುರೇಂದ್ರನ್ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಶಾಸಕ ಟಿ.ಸಿದ್ಧಿಕಿ, ‘ಅವರು ಏನಾದರೂ ಹೇಳಿಕೊಳ್ಳಲಿ. ಅವರಂತೂ ಗೆಲ್ಲುವುದಿಲ್ಲ. ಜನರ ಗಮನ ಸೆಳೆಯಲು ಇದೊಂದು ತಂತ್ರವಷ್ಟೇ. ಅದು ಎಂದಿಗೂ ಆಗುವುದಿಲ್ಲ. ಅವರ ಹೇಳಿಕೆಗೆ ಮಾನ್ಯತೆಯೂ ಇಲ್ಲ’ ಎಂದಿದ್ದಾರೆ.