ಗದಗ: ಹೈಸ್ಕೂಲ್ ಮಕ್ಕಳು ಚಲಾಯಿಸುತ್ತಿದ್ದ ಕಾರು ಡಿವೈಡರ್ಗೆ ಗುದ್ದಿ ಛಿದ್ರಛಿದ್ರವಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, ಮತ್ತಿಬ್ಬರು ಗಾಯಗೊಂಡ ಘಟನೆ ಗದಗ ತಾಲೂಕಿನ ಹುಲಕೋಟಿ ರೂರಲ್ ಇಂಜಿನಿಯರಿಂಗ್ ಕಾಲೇಜ್ ಬಳಿ ನಡೆದಿದೆ ಎಂದು ವರದಿಯಾಗಿದೆ.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿ ತಡರಾತ್ರಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತರು ಹಾಗೂ ಗಾಯಾಳುಗಳು ಹುಲಕೋಟಿ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದವರು. ವಿದ್ಯಾರ್ಥಿಗಳಲ್ಲಿ ಒಬ್ಬ ಕಾರು ಚಾಲನೆ ಮಾಡುತ್ತಿದ್ದ. ಮಹಮ್ಮದ್ ಮುಜಾವರ್ (16), ಸಂಜೀವ್ ಗಿರಡ್ಡಿ (16) ಮೃತಪಟ್ಟಿದ್ದಾರೆ. ಆಶಿಸ್ ಗುಂಡೂರ್ (16) ಹಾಗೂ ಮತ್ತೊಬ್ಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ.
ಕಾರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದರು. ವಾರ್ಷಿಕೋತ್ಸವದ ಮುಗಿಸಿಕೊಂಡು ಉತ್ಸಾಹದಿಂದ ವಾಪಸ್ ಆಗುತ್ತಿದ್ದಾಗ ಅತಿಯಾದ ವೇಗದಿಂದ ಚಲಾಯಿಸಿ ಡಿವೈಡರ್ಗೆ ಕಾರು ಅಪ್ಪಳಿಸಿದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಮೃತ ದೇಹಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.