ಬೆಟಗೇರಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ : 29 ಜನರ ಮೇಲೆ ಪ್ರಕರಣ ದಾಖಲು

ಬೆಳಗಾವಿ : ಕೌಜಲಗಿ ಬಳಿಯ ಬೆಟಗೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕೇಸರಿ ಮತ್ತು ನೀಲಿ ಧ್ವಜ ಹಾರಿಸುವ ಸಂಬಂಧ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದು 29 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗ್ರಾಮದಲ್ಲಿ ಈಗಲೂ ಬಿಗುವಿನ ವಾತಾವರಣ ಇದೆ. ಎರಡು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಬೆಟಗೇರಿ ಗ್ರಾಮದ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಧ್ವಜಕಟ್ಟೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಸಲುವಾಗಿ ಕೇಸರಿ ಧ್ವಜ ಹಾರಿಸಲಾಗಿತ್ತು, ಇದಕ್ಕೆ ಪರಿಶಿಷ್ಟ ಸಮುದಾಯದ ಮುಖಂಡರ ಅರುಮತಿ ಪಡೆಯಲಾಗಿತ್ತು, ಶುಕ್ರವಾರ ಕೇಸರಿ ಧ್ವಜ ಇಳಿಸಿ ನೀಲಿ ಧ್ವಜ ಹೋರಿಸಲಾಗಿದೆ. ಇದೇ ವಿಚಾರವಾಗಿ ಶುಕ್ರವಾರ ತಡರಾತ್ರಿ ಬೇರೆ ಬೇರೆ ಸಮುದಾಯದ ಯುವಕರ ನಡುವೆ ಜಗಳ ಶುರುವಾಗಿ ವಾದ-ವಿವಾದ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸಿ ಘರ್ಷಣೆವರೆಗೂ ತಿರುಗಿದೆ. ರಾತ್ರಿಯೇ ಸ್ಥಳಕ್ಕೆ ಧಾವಿಸಿದ ಕುಲಗೋಡ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರು. ಶನಿವಾರ ಸಂಜೆವರೆಗೆ ಇಬ್ಬರು ಪ್ರಮುಖರನ್ನು ಬಂಧಿಸಿ ಒಟ್ಟು 29 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಉಳಿದವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, ಡಿವೈ ಎಸ್ ಪಿ ಜಾವೇದ್ ಮುಲ್ಲಾ , ಮೂಡಲಗಿ ಸಿಪಿಐ ಅಬ್ದುಲ್ ವಾಜೀದ್ ಪಟೇಲ್, ಕುಲಗೋಡ ಪಿಎಸ್ ಐ ಆನಂದ ಸ್ಥಳ ಪರಿಶೀಲನೆ ನಡೆಸಿದ್ದಾರೆ.