
ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಪ್ರಾರಂಭೋತ್ಸವ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೇಸಿ ರಾಜೇಂದ್ರ ಭಟ್, ದೀಪ ಪ್ರಜ್ವಲನಗೊಳಿಸಿ ಮಾತನಾಡಿ , ಜೀವನದಲ್ಲಿ ಕೇವಲ ಅಂಕ ಗಳಿಕೆಯೊಂದೇ ಪ್ರಾಮುಖ್ಯವಲ್ಲ. ಅದರ ಜೊತೆ ಸಂಸ್ಕಾರ ಕೂಡ ಮುಖ್ಯ. ಅಮೃತ ಭಾರತಿ ಆ ರೀತಿಯ ಸಂಸ್ಕಾರವನ್ನು ಕಲಿಸುವ ಕೆಲಸವನ್ನು ನಿರಂತರ ಮಾಡುತ್ತಾ ಬಂದಿದೆ. ಮಾತೃ ವಂದನಾದಂತಹ ಮಾದರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ, ಅಮೃತ ಭಾರತಿಯಲ್ಲಿ ಕಲಿತ ಮಗು ಎಂದಿಗೂ ಕೂಡ ತನ್ನ ತಂದೆ-ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸುವುದಿಲ್ಲ , ದೇಶದ್ರೋಹದ ಕೆಲಸವನ್ನು ಮಾಡುವುದಿಲ್ಲ. ಉತ್ತಮ ಶಿಕ್ಷಣದೊಂದಿಗೆ ಸುಸಂಸ್ಕೃತ ವ್ಯಕ್ತಿಯಾಗಿ ಬೆಳೆಯುತ್ತಾರೆ ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಮೃತ ಭಾರತಿಯ ಮೇಲೆ ಪ್ರೀತಿ ವಿಶ್ವಾಸ ಇಟ್ಟು, ಈ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಾವು ಸದಾ ಕಟಿಬದ್ಧರಾಗಿದ್ದೇವೆ ಎಂದರು.
ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ ಮಾತನಾಡಿ, ಅಮೃತ ಭಾರತಿ ಟ್ರಸ್ಟ್ ನ ಪದಾಧಿಕಾರಿಗಳಾದ ನಾವೆಲ್ಲರೂ ಸಮಾಜ ಸೇವೆಯ ದೃಷ್ಟಿಯಿಂದ ಈ ಸಂಸ್ಥೆಯನ್ನು ಕಟ್ಟಿ ಯಾವ ಪ್ರತಿಫಲ ಅಪೇಕ್ಷೆಯು ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದೇವೆ. ಸಂಸ್ಕಾರಯುತ ಶಿಕ್ಷಣದ ಜೊತೆಗೆ ಮಾತೃ ಹೃದಯಿ , ದೇಶಭಕ್ತ ಯುವ ಜನಾಂಗವನ್ನು ಸೃಷ್ಟಿಸುವುದು ನಮ್ಮ ಗುರಿ ಎಂದರು.
ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಸತೀಶ್ ಪೈ , ಟ್ರಸ್ಟಿಗಳಾದ ಬಾಲಕೃಷ್ಣ ಮಲ್ಯ, ಯೋಗೀಶ್ ಭಟ್, ಸುಧೀರ್ ನಾಯಕ್, ಭಾಸ್ಕರ್ ಜೋಯಿಸ್ , ವಿಷ್ಣುಮೂರ್ತಿ ನಾಯಕ್, ಲಕ್ಷ್ಮಣ್ ಭಟ್ ಹಾಸ್ಟೆಲ್ ಕಮಿಟಿ ಸದಸ್ಯ ರಾಮಕೃಷ್ಣ ಆಚಾರ್ಯ ಪ್ರಾಂಶುಪಾಲ ಪ್ರಕಾಶ್ ಜೋಗಿ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ವೀಣೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿ ವಿಜಯ್ ಕುಮಾರ್ ಶೆಟ್ಟಿ ಸ್ವಾಗತಿಸಿ ಆಂಗ್ಲಭಾಷೆ ಉಪನ್ಯಾಸಕಿ ಚಂದ್ರಕಲಾ ವಂದಿಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪೋಷಕರು ಬೋಧಕ ಬೋಧಕೇತರ ರಂಗದವರು ಉಪಸ್ಥಿತರಿದ್ದರು.