ಉಡುಪಿ : ಶಿರ್ವ ಶ್ರೀ ಸಿದ್ಧಿ ವಿನಾಯಕ ದೇಗುಲದ ಸಂಸ್ಥಾಪಕ ಗ್ಯಾಬ್ರಿಯಲ್ ಫೇಬಿಯನ್ (80) ಆಗಸ್ಟ್ 18 ರ ಭಾನುವಾರ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನದರು. ಮೃತರ ಅಂತ್ಯಕ್ರಿಯೆ ಆಗಸ್ಟ್ 19 ರಂದು ಮಧ್ಯಾಹ್ನ 3 ಗಂಟೆಗೆ ಶಿರ್ವ ಆರೋಗ್ಯ ಮಾತೆ ದೇವಾಲಯದಲ್ಲಿ ನಡೆಯಲಿದೆ. ಮೃತರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಬೆಳಗ್ಗೆ 11 ರಿಂದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಬಳಿಯ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸಿದ್ದಿವಿನಾಯಕನ ಮೆಚ್ಚಿನ ಭಕ್ತ : ಶ್ರೀ ಸಿದ್ಧಿ ವಿನಾಯಕನ ಪರಮ ಭಕ್ತರಾಗಿದ್ದ ಅವರು ತನ್ನ ಧರ್ಮದ ಜೊತೆಗೆ ಹಿಂದೂ ಧರ್ಮದ ಬಗ್ಗೆ ಅಪಾರ ಪ್ರೀತಿ ಮತ್ತು ಚಿಂತನೆ ಇಟ್ಟುಕೊಂಡಿದ್ದರು. ಮುಂಬೈಯಲ್ಲಿದ್ದ ತನ್ನ ಸ್ವಂತ ಉದ್ದಿಮೆ ಮಾರಾಟ ಮಾಡಿ ಊರಿಗೆ ಬಂದು ನೆಲೆಸಿದ ನಂತರ 15 ಸೆಂಟ್ಸ್ ಜಾಗದಲ್ಲಿ ಕಟಪಾಡಿ ಮತ್ತು ಶಿರ್ವ ಮುಖ್ಯ ರಸ್ತೆಯ ಮಟ್ಟಾರು-ಅಟ್ಟಿಂಜ ಕ್ರಾಸ್ ಬಳಿ 2 ಕೋಟಿ ವೆಚ್ಚದಲ್ಲಿ ತನ್ನ ಹೆತ್ತವರ ನೆನಪಿಗೆ ಶ್ರೀ ಸಿದ್ಧಿ ವಿನಾಯಕ ದೇಗುಲ ನಿರ್ಮಿಸಿ ಗಮನ ಸೆಳೆದಿದ್ದರು. 2021ರ ಜುಲೈ 15 ರಂದು ದೇಗುಲ ಲೋಕಾರ್ಪಣೆಗೊಂಡಿತ್ತು.
ಐದು ದಶಕಗಳ ಕಾಲ ಉದ್ಯಮಿಯಾಗಿ ಬಳಿಕ ನಿವೃತ್ತಿಗೊಂಡು ತನ್ನ ಸ್ವಂತ ಊರಿಗೆ ಬಂದು ನೆಲೆಸಿದ್ದ ಗ್ಯಾಬ್ರಿಯಲ್, ತನ್ನ ಆರಾಧ್ಯ ಗಣಪತಿಗೆ ತನ್ನೂರಲ್ಲೇ ಗುಡಿ ಕಟ್ಟಿಸಿದ್ದರು. ಮುಂಬೈನಲ್ಲಿ ಉದ್ಯಮಿಯಾಗಿದ್ದ ಗ್ಯಾಬ್ರಿಯಲ್ ನಜ್ರತ್ ತನ್ನನ್ನು ಮೇಲೆ ತಂದಿದ್ದಾರೆ ಎಂದು ನಂಬಿದ್ದ ಗಣಪತಿಯನ್ನು ಉದ್ಯಮದಿಂದ ನಿವೃತ್ತಿಯಾದರೂ ಬಿಡಲಿಲ್ಲ. ಉದ್ಯಮಿಯಾಗಿ ಬಳಿಕ ನಿವೃತ್ತಿಗೊಂಡು ತನ್ನ ಸ್ವಂತ ಊರಿಗೆ ಬಂದು ನೆಲೆಸಿದ್ದ ಗ್ಯಾಬ್ರಿಯಲ್, ತನ್ನ ಆರಾಧ್ಯ ಗಣಪತಿಗೆ ತನ್ನೂರಲ್ಲೇ ಗುಡಿ ಕಟ್ಟಿಸಿದ್ದರು. ಎರಡು ಕೋಟಿ ರೂಪಾಯಿ ಖರ್ಚು ಮಾಡಿ, ಸಿದ್ಧಿ ವಿನಾಯಕನಿಗೆ ದೇವಸ್ಥಾನ ಕಟ್ಟಿಸಿ ಲೋಕಾರ್ಪಣೆ ಮಾಡಿದ್ದರು.
ಐದು ದಶಕಗಳ ಹಿಂದೆ ಬರಿಗೈಯಲ್ಲಿ ಮುಂಬೈನ ದಾದರ್ ಗೆ ತೆರಳಿದ್ದ ಗ್ಯಾಬ್ರಿಯಲ್ ಅಲ್ಲಿನ ಸಿದ್ಧಿವಿನಾಯಕ ದೇವಸ್ಥಾನದ ಬಳಿಯೇ ನೆಲೆಸಿದ್ದರು. ಅವರು ಶ್ರೀ ಸಿದ್ಧಿ ವಿನಾಯಕನನ್ನು ನೆನೆದು ಸ್ವ ಪ್ರಯತ್ನದಿಂದ ದೇವಸ್ಥಾನದ ಬಳಿ ಪ್ಲಾಸ್ಟಿಕ್ ಮತ್ತು ಮೆಟಲ್ ಡೈ ಮೇಕಿಂಗ್ ವರ್ಕ್ ಶಾಪ್ ಸ್ಥಾಪಿಸಿ ಯಶಸ್ಸು ಗಳಿಸಿದ್ದರು. ಸುಮಾರು 40 ವರ್ಷಗಳಲ್ಲಿ ಮೂರು ಕಡೆ ಉದ್ದಿಮೆ ಸ್ಥಾಪನೆ ಮಾಡಿದ್ದರು. ಕೊಡುಗೈ ದಾನಿಯಾಗಿ ಅವರು ಕೀರ್ತಿ ಸಂಪಾದಿಸಿದ್ದರು. ನೋಡ ನೋಡುತ್ತಲೇ ಉದ್ಯಮ ಸ್ಥಾಪಿಸಿ, ಯಶಸ್ಸು ಪಡೆದ ಗ್ಯಾಬ್ರಿಯಲ್ ತನ್ನ ಉನ್ನತಿಗೆ ಗಣಪತಿಯೇ ಕಾರಣವೆಂದು ನಂಬಿದ್ದರು. ಆ ಬಳಿಕ ದಾದರ್ ಸಿದ್ಧಿವಿನಾಯಕನ ಅನನ್ಯ ಭಕ್ತರೂ ಆಗಿದ್ದರು. ಉದ್ಯಮದಲ್ಲಿ ಅಪಾರ ಲಾಭ ಗಳಿಸಿದ ಗ್ಯಾಬ್ರಿಯಲ್, ವರ್ಷಗಳ ಹಿಂದೆ ಕೆಲಸಕ್ಕೆ ನಿವೃತ್ತಿ ಘೋಷಿಸಿ, ತಮ್ಮ ಸ್ವಂತ ಊರಾದ ಉಡುಪಿಯ ಶಿರ್ವಕ್ಕೆ ಬಂದು ನೆಲೆಸಿದ್ದರು. ದಾನಿಯಾಗಿದ್ದ ಅವರು ಮುಂಬೈಯ ಉದ್ದಿಮೆ ಮಾರಿ ಬಂದ ಹಣವನ್ನು ಅಲ್ಲಿಯ ಸಿಬ್ಬಂದಿ ವರ್ಗಕ್ಕೆ ದಾನವಾಗಿ ನೀಡಿ ಬಂದಿದ್ದರು. ಜಾತಿ ಮತವಿಲ್ಲದೆ ಸುಮಾರು 50 ಜನರ ಮದುವೆಗೆ ಧನ ಸಹಾಯ ಮಾಡಿದ್ದರು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದು ಸರ್ವಧರ್ಮದ ಬಡ ಜನರ ಸೇವೆಗೆ ನಿವೇಶನವನ್ನು ಕೊಡುಗೆಯಾಗಿ ನೀಡಿದ್ದರು.
ಶಿರ್ವದಲ್ಲಿಯೇ ವಿನಾಯಕನ ದೇವಸ್ಥಾನ ಕಟ್ಟಿಸಬೇಕೆಂದು ತಮ್ಮದೇ ಜಮೀನಿನಲ್ಲಿ ದೇಗುಲ ಕಟ್ಟಿಸಿದ್ದಾರೆ. ದೇವಸ್ಥಾನದ ಕಾಮಗಾರಿ ಆಗಿತ್ತು. ಆದರೆ, ಲಾಕ್ ಡೌನ್ ಕಾರಣದಿಂದ ದೇವಸ್ಥಾನದ ಲೋಕಾರ್ಪಣೆ ಕಾರ್ಯ ಮುಂದೂಡಿಕೆಯಾಗಿತ್ತು. ಕೊನೆಗೂ 2021 ರ ಜುಲೈ 14, 15 ಮತ್ತು 16ರಂದು ಪ್ರತಿಷ್ಠಾ ಉತ್ಸವ ನಡೆದಿತ್ತು.ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಕಾರ್ಯ ನಡೆದಿತ್ತು. ದೇವಳದ ನಿರ್ಮಾತೃ ಗ್ಯಾಬ್ರಿಯಲ್ ನಜ್ರತ್, ದೇಗುಲದ ನಿರ್ಮಾಣದ ಬಗ್ಗೆ ಜನರಿಂದ ಯಾವುದೇ ದೇಣಿಗೆ ಸ್ವೀಕರಿಸದೆ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿಸಿದ್ದು, ದೇಗುಲದಲ್ಲಿ ಪೂಜಾ ಕಾರ್ಯಕ್ಕೆ ಅರ್ಚಕರನ್ನೂ ನೇಮಿಸಿದ್ದಾರೆ.
ಗ್ಯಾಬ್ರಿಯಲ್ ತಮ್ಮ ಹೆತ್ತವರ ನೆನಪಿಗಾಗಿ ದೇವಸ್ಥಾನವನ್ನು ಅರ್ಪಿಸಿದ್ದಾರೆ. ಶಿಲಾಫಲಕದಲ್ಲಿ ಹೆತ್ತವರಾದ ದಿ.ಪಾಬಿಯನ್ ನಜ್ರತ್ ಮತ್ತು ಸಬೀನಾ ನಜ್ರತೆ ನೆನಪಿಗಾಗಿ ಎಂದು ನಮೂದಿಸಿದ್ದಾರೆ. ಶಿರ್ವದಲ್ಲಿ ಕ್ರಿಸ್ತಿಯನ್ ವ್ಯಕ್ತಿಯೊಬ್ಬರು ಹಿಂದುಗಳ ಆರಾಧನೆಯ ದೇಗುಲವನ್ನು ನಿರ್ಮಿಸಿದ್ದು, ಧಾರ್ಮಿಕ ಸಾಮರಸ್ಯದ ಸಂಕೇತ ಎನ್ನುವ ರೀತಿ ಪ್ರಸಿದ್ದಿ ಪಡೆದಿದೆ. ಸ್ಥಳೀಯರು ಗ್ಯಾಬ್ರಿಯಲ್ ಕೆಲಸವನ್ನು ಕೊಂಡಾಡಿದ್ದು, ದೇಗುಲಕ್ಕೆ ದೇಣಿಗೆ ಸ್ವೀಕಾರ ಮಾಡಿಲ್ಲ. ತಮ್ಮದೆಂದು ದೀಪ, ಗಂಟೆಗಳಾದರೂ ಇರಲಿ ಎಂದು ಅದನ್ನು ದೇವರಿಗೆ ಅರ್ಪಿಸಿದ್ದಾರೆ. ಶಿರ್ವದಲ್ಲಿ ಗೇಬ್ರಿಯಲ್ ನಜರೆತ್ ನಿರ್ಮಿಸಿದ ಸಿದ್ಧಿವಿನಾಯಕ ದೇವಾಲಯವು ಜಗತ್ತಿಗೆ ಸಮರ್ಪಿತವಾಗಿದೆ.