ಬೆಂಗಳೂರು : ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ದನದ ಕೆಚ್ಚಲು ಕೊಯ್ದು ವಿಕೃತಿ ಮೆರೆಯಲಾಗಿದೆ.
ಕರ್ಣ ಎಂಬುವವರಿಗೆ ಸೇರಿದ ಮೂರು ಹಸುಗಳ ಕೆಚ್ಚಲು ಕೊಯ್ದ ಕಿರಾತಕರು ರಕ್ತದ ಕೋಡಿಯನ್ನೇ ಹರಿಸಿ ಪರಾರಿಯಾಗಿದ್ದು, ರವಿವಾರ ಮುಂಜಾನೆ (ಜ.12) ಘಟನೆ ಬೆಳಕಿಗೆ ಬಂದಿದೆ. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಒಟ್ಟು 8 ಹಸುಗಳ ಸಾಕಿರುವ ಕರ್ಣ ಈ ಪೈಕಿ ಮೂರರಿಂದ ನಾಲ್ಕು ಹಸುಗಳು ಮನೆಯಿಂದ ಕೆಲವೇ ದೂರದಲ್ಲಿರುವ ರಸ್ತೆಯಲ್ಲಿ ಮಲಗಿದ್ದ ಹಸುಗಳ ಕೆಚ್ಚಲನ್ನು ತಡರಾತ್ರಿ ಕಿಡಿಗೇಡಿಗಳು ಕೊಯ್ದಿದ್ದಾರೆ.
ಈ ಬಗ್ಗೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ.
ಭುಗಿಲೆದ್ದ ಆಕ್ರೋಶ, ಸ್ಥಳದಲ್ಲಿ ಬಿಗುವಿನ ವಾತಾವರಣ
ಮೂಕ ಪ್ರಾಣಿಗಳ ಕೆಚ್ಚಲು ಕೊಯ್ದ ಘಟನೆ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದು, ಸ್ಥಳಕ್ಕೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಭೇಟಿ ನೀಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ರಮೇಶ್ ದೌಡಾಯಿಸಿದ್ದಾರೆ.