ಬೆಂಗಳೂರು: ಪರೀಕ್ಷಾ ಅಕ್ರಮಗಳ ವಿರುದ್ಧ ಇದೀಗ ರಾಜ್ಯ ಸರಕಾರ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಹಾಗೂ ಇಲಾಖಾ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಮಹತ್ವದ ಆದೇಶ ಹೊರಡಿಸಿದ್ದಾರೆ.

ಕೆಲವು ಕಿಡಿಗೇಡಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಪ್ರಯತ್ನಪಡುವುದು ಈ ತರಹದ ಕಾನೂನುಬಾಹಿರ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುವ ಮೂಲಕ ವಿದ್ಯಾರ್ಥಿ/ಪೋಷಕರಲ್ಲಿ ಗೊಂದಲವುಂಟುಮಾಡುವುದು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದು ಇವರ ಉದ್ದೇಶವಾಗಿರುತ್ತದೆ. ಇದಕ್ಕೆ ಅಧಿಕಾರಿಗಳು, ನೌಕರರು ನೆರವಾಗುತ್ತಾರೆ. ಇಂತಹವರ ವಿರುದ್ಧ ಇಲಾಖೆಯು ಅತ್ಯಂತ ಗಂಭೀರ ಕ್ರಮ ಕೈಗೊಳ್ಳಲು ಮುಂದಾಗಿದೆ. ಪರೀಕ್ಷಾ ಅವ್ಯವಹಾರವನ್ನು ತಡೆಗಟ್ಟಲು ಕಠಿಣ ಕ್ರಮವನ್ನು ಕೈಗೊಳ್ಳುವುದು ಸೂಕ್ತವೆಂದು ಪರಿಗಣಿಸಿರುವ ಸರ್ಕಾರ, ಕ್ರಿಮಿನಲ್ ಮೊಕದ್ದಮೆಯ ಜತೆಗೆ ಇಲಾಖಾ ವಿಚಾರಣೆ ನಡೆಸಿ ಕಠಿಣ ದಂಡನೆ ವಿಧಿಸಲು ಸರ್ಕಾರವು ತೀರ್ಮಾನಿಸಿದೆ.