ಬೆಳಗಾವಿ: ಕೃಷಿ ಕೆಲಸ ಮುಗಿಸಿ ಸ್ನಾನ ಮಾಡಲು ನದಿಗೆ ತೆರಳಿದ್ದ ರೈತನ ಮೇಲೆ
ಮೊಸಳೆ ದಾಳಿ ಮಾಡಿದ ಘಟನೆ ನಡೆದಿದೆ. ಮೊಸಳೆ ವ್ಯಕ್ತಿಯನ್ನು ನೀರಿನೊಳಗೆ ಎಳೆದುಕೊಂಡು ಹೋದ ಪರಿಣಾಮ ರೈತ ಮೃತಪಟ್ಟಿರುವ ಘಟನೆ ಚಿಕ್ಕೋಡಿ ತಾಲೂಕಿನ ದತ್ತವಾಡ-ಸದಲಗಾ ಬಳಿಯ ದೂಧಗಂಗಾ ನದಿ ದಡದಲ್ಲಿ ನಡೆದಿದೆ.

ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ನಿವಾಸಿ ಮಹಾದೇವ ಪುನ್ನಪ್ಪ ಖುರೆ (72) ಮೃತ ರೈತ.

ಇವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರು ನದಿ ಜಲಾನಯನ ಪಕ್ಕದ ಕಾಂತಿ ಪ್ರದೇಶದಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿ ಸ್ನಾನಕ್ಕೆಂದು ನದಿಗೆ ತೆರಳಿದ್ದರು. ನದಿಯಲ್ಲಿ ಸ್ವಲ್ಪ ಹೊತ್ತು ಈಜಿಕೊಂಡು ನಂತರ ನದಿಯ ದಡಕ್ಕೆ ಬರುತ್ತಿದ್ದಾಗ ಮೊಸಳೆ ಅವರ ಕಾಲು ಹಿಡಿದು ನೀರಿನೊಳಗೆ ಎಳೆದುಕೊಂಡು ಹೋಗಿದೆ. ರೈತ ಮಹದೇವನ ಎಡತೊಡೆಯ ಮೇಲೆ ಗಾಯದ ಗುರುತು ಇದ್ದು, ರಮೇಶ ಪ್ರಧಾನ ಎಂಬುವವರ ಜಮೀನಿನ ಬಳಿಯ ನದಿ ದಡದಲ್ಲಿ ಮೃತ ದೇಹ ಪತ್ತೆಯಾಗಿದೆ.