ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಿರ್ವಹಿಸಿದ ಹಿರಿಯ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು (59 ವರ್ಷ) ನಿಧನರಾದರು. ಬುಧವಾರ ಕೋಟ ಗಾಂಧಿ ಮೈದಾನದಲ್ಲಿ ನಡೆದ ಯಕ್ಷಗಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿರುವಾಗ ಅವರಿಗೆ ತೀವ್ರ ಹೃದಯಾಘಾತವಾಗಿ, ಮೃತಪಟ್ಟಿದ್ದಾರೆ. ಸೇಡಿಯಾಪು ಮನೆಯಲ್ಲಿ ಜನಿಸಿದ ಅವರು, ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದು, ನಂತರ ಕೆ.ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್ ಅವರಲ್ಲಿ ನಾಟ್ಯಾಭ್ಯಾಸ ಕಲಿತರು.18ನೇ ವಯಸ್ಸಿನಿಂದ ಮೇಳ ತಿರುಗಾಟ ಆರಂಭಿಸಿದ ಅವರು, ಎಲ್ಲಾ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಹಾಸ್ಯದ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವ ಪ್ರೌಢಿಮೆ ಅವರಲ್ಲಿತ್ತು.
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸುತ್ತಿದ್ದ ಖ್ಯಾತ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಬುಧವಾರ ಮೇ 1 ರಂದು ಕೋಟದಲ್ಲಿ ನಡೆಯುತ್ತಿದ್ದ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಕುಕ್ಕಿತ್ತಾಯನ ವೇಷ ಧರಿಸಿದ್ದ ಅವರು ರಾತ್ರಿ 12.25 ರ ವೇಳೆಗೆ ವೇಷ ತೆಗೆಯುತ್ತಿದ್ದ ವೇಳೆ ಹೃದಯಘಾತದಿಂದ ನಿಧನರಾಗಿದ್ದಾರೆ.
ನಾರಾಯಣ ಮಯ್ಯ ಮತ್ತು ಲಕ್ಷ್ಮೀ ದಂಪತಿಯ ಪುತ್ರರಾಗಿರುವ ಅವರು, ಪುತ್ತೂರು ತಾಲೂಕಿನ ಸೇಡಿಯಾಪು ಗ್ರಾಮದಲ್ಲಿ 1964 ರಲ್ಲಿ ಜನಿಸಿದ್ದರು. 17ನೇ ವರ್ಷಕ್ಕೆ ಯಕ್ಷಗಾನ ಸಂಚಾರ ಆರಂಭಿಸಿದ್ದ ಅವರು ಸ್ತ್ರೀ ವೇಷ, ರಾಜವೇಷ, ಪುಂಡುವೇಷದಲ್ಲಿ ಹೆಸರುವಾಸಿಯಾಗಿದ್ದರು. ದೇವೇಂದ್ರ, ದುಶ್ಯಾಸನ, ಸೀತೆ, ಶ್ರೀದೇವಿ, ಪ್ರಮೀಳೆ, ದಾಕ್ಷಾಯಿಣಿ, ಮೋಹಿನಿ, ಚಿತ್ರಾಂಗದೆ, ಮಾಲಿನಿ ಮುಂತಾದ ಪಾತ್ರಗಳಲ್ಲಿ ಅವರು ಖ್ಯಾತನಾಮರಾಗಿದ್ದರು.