ಲೋಕಸಭಾ ಚುನಾವಣೆಗೆ ತಾವು ಸ್ಪರ್ಧೆ ನಡೆಸುವುದಿಲ್ಲ ಎಂದು ಕುಮಾರಸ್ವಾಮಿ ಈಗಾಗಲೇ ಸ್ಪಷ್ಟಪಡಿಸಿದ್ದರೂ ಅವರನ್ನು ಮಂಡ್ಯದಿಂದ ಚುನಾವಣೆಗೆ ಕಣಕ್ಕಿಳಿಸುವ ಬಗ್ಗೆ ಜೋರಾಗಿ ಚರ್ಚೆ ನಡೆದಿದೆ. ಇನ್ನೊಂದೆಡೆ ರಾಜ್ಯಸಭೆಗೆ ಕಳಿಸಿ ಕೇಂದ್ರ ಸಚಿವರನ್ನಾಗಿ ಮಾಡಬಹುದು ಎಂಬ ಊಹಾಪೋಹವೂ ಇದೆ.

ಬೆಂಗಳೂರು :
ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಸದ್ಯವೇ ಕೇಂದ್ರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಚರ್ಚೆ ಇದೀಗ ಜೋರಾಗಿ ನಡೆದಿದೆ.

ಎನ್ ಡಿ ಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್ ಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ತವಕದಲ್ಲಿರುವ ಬಿಜೆಪಿ ರಾಮಮಂದಿರ ಉದ್ಘಾಟನೆ ನಂತರ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಗೆದ್ದ ನಂತರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇಂದ್ರ ಸಂಪುಟ ಸೇರ್ಪಡೆಗೊಂಡರೆ ಅದೇ ಖಾತೆ ಕುಮಾರಸ್ವಾಮಿಗೆ ಸಿಗುವ ಸಾಧ್ಯತೆ ಇದೆ. ಕೃಷಿ ಖಾತೆ ರಾಜ್ಯ ಸಚಿವರಾಗಿ ಶೋಭಾ ಕರಂದ್ಲಾಜೆ ಕಾರ್ಯನಿರ್ವಹಿಸುತ್ತಿದ್ದು ಕುಮಾರಸ್ವಾಮಿ ಕೃಷಿ ಸಚಿವರಾದರೆ ಶೋಭಾ ಅವರ ಖಾತೆ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಈ ನಡುವೆ ಭಾನುವಾರ ಕೇಂದ್ರ ಕೃಷಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ ಮುಂಡಾ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿಗೆ ಸೇರಿಸುವುದು, ರಾಜ್ಯದ ತೆಂಗು ಬೆಳೆಗಾರರಿಂದ ಕೊಬ್ಬು ಖರೀದಿ ಮತ್ತು ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.