ಬೆಳಗಾವಿ : ಮೀಡಿಯಾ ನಾಮಫಲಕ ಹಾಕಿಕೊಂಡು ವಾಹನದಲ್ಲಿ ಶ್ರೀಗಂಧ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ನ್ನು ಹೆಡೆಮುರಿ ಕಟ್ಟಲಾಗಿದೆ.

ಹುಕ್ಕೇರಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಈ ಗ್ಯಾಂಗ್ ನ್ನು ಬಂಧಿಸಿದ್ದಾರೆ.

ಗುಡಸ ಗ್ರಾಮದ ಗಾಯರಾಣ ಪ್ರದೇಶಕ್ಕೆ ಹೊಂದಿಕೊಂಡಿರುವ ಗುಡ್ಡದ ಲಕ್ಷ್ಮೀದೇವಿ ದೇವಸ್ಥಾನ ಬಳಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ತಂಡ ದಾಳಿ ನಡೆಸಿ ಇಬ್ಬರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಪುಂಡಲೀಕ ಭಜಂತ್ರಿ, ಪರಸಪ್ಪ ಭಜಂತ್ರಿ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.
ಸೋಮವಾರ ಸಂಜೆ ಕಾರ್‌ನಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಗಳ ವಿಶೇಷ ತಂಡ ದಾಳಿ ನಡೆಸಿತು. ಈ ವೇಳೆ ಸುಮಾರು ೪ ಲಕ್ಷ ರೂ ಮೌಲ್ಯದ ೪೦ ಕೆಜಿ ಶ್ರೀಗಂಧ, ೪ ಲಕ್ಷ ರೂ ಬೆಲೆಬಾಳುವ ಕಾರ್ ಸೇರಿ ಒಟ್ಟು ೮ ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾರ್ಗದರ್ಶನದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಕಲ್ಲೋಳಿಕರ ನಿರ್ದೇಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರುದ್ರಪ್ಪ ಕಬಾಡಗಿ, ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಪ್ರಸನ್ ಬೆಲ್ಲದ ನೇತೃತ್ವದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ವಿಷ್ಣುಕುಮಾರ ನಾಯಕ, ಗಸ್ತು ವನಪಾಲಕ ರಾಯಪ್ಪ ಬಬಲಿ, ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ದಾಳಿ ವೇಳೆ ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಪ್ರಾದೇಶಿಕ ಅರಣ್ಯ ವಲಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ. ಪ್ರಕರಣದ ಆರೋಪಿಗಳು ನಕಲಿ ಪತ್ರಕರ್ತರೆಂದು ತಿಳಿದು ಬಂದಿದ್ದು ಪತ್ರಕರ್ತರ ಸೋಗಿನಲ್ಲಿ ಶ್ರೀಗಂಧದ ತುಂಡುಗಳ ಸಾಗಣೆಗೆ ಕಾರ್ ಬಳಸಿದ್ದಾರೆ ಎನ್ನಲಾಗಿದೆ.