ಬೆಳಗಾವಿ: ಮಂಗಳೂರು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯ ಮನೆಯಲ್ಲಿ 13 ವರ್ಷದ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಮಂಗಳವಾರ ಹಗಲು ಹೊತ್ತಿನಲ್ಲೇ ಕೊಲೆ ಮಾಡಲಾಗಿತ್ತು. ಬಾಲಕಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನವಳು ಎಂಬ ಮಾಹಿತಿ ಗೊತ್ತಾಗಿದೆ.

ಬಾಲಕಿಗೆ ಕೈ ನೋವು ಚಿಕಿತ್ಸೆ ಕಾರಣಕ್ಕೆ ರಾಮದುರ್ಗದಿಂದ ಮಂಗಳೂರಿಗೆ ಹೋಗಿ ಸಂಬಂಧಿಕರ ಮನೆಯಲ್ಲಿ ತಂಗಿದ್ದಳು. ಆಗ ಈ ಕೃತ್ಯ ನಡೆಸಲಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗದ ಕಾರ್ಮಿಕರೊಬ್ಬರು ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹನುಮಂತ ಎಂಬುವವರ ಸಹೋದರನ ಮಗಳಾದ ಬಾಲಕಿ ಕೈ ನೋವಿಗೆ ಚಿಕಿತ್ಸೆ ಪಡೆಯಲು ಮಂಗಳೂರಿಗೆ ಬಂದು ಅವರ ಮನೆಯಲ್ಲೇ ಉಳಿದುಕೊಂಡಿದ್ದಳು. ಮನೆಯವರು ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಹೋಗಿದ್ದರು. ಬಾಲಕಿ ತಾಯಿ ಬೆಳಗ್ಗೆ 11:30 ರ ಸುಮಾರಿಗೆ ನೆರೆಯ ಮನೆಯವರಿಗೆ ಕರೆ ಮಾಡಿ ಬಾಲಕಿಗೆ ಫೋನ್ ಕೊಡಲು ತಿಳಿಸಿದ್ದರು. ಆಗ ಅವರು ಹೋದಾಗ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಸಾಯಿಸಿರುವ ದೃಶ್ಯ ಬೆಳಕಿಗೆ ಬಂದಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು, ಪಕ್ಕದ ಮನೆಯವರು ಬಂದು ನೋಡಿದಾಗ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಮೃತಪಟ್ಟಿದ್ದಳು. ಪಕ್ಕದ ಮನೆಯವರು ತಾಯಿಗೆ ಫೋನಿನಲ್ಲಿ ವಿಷಯ ತಿಳಿಸಿದ್ದಾರೆ. ಬಾಲಕಿಯ ತಾಯಿ ಮನೆಯ ಯಜಮಾನನಿಗೆ ಫೋನ್ ಮಾಡಿ ಕೂಡಲೇ ಮನೆಗೆ ತೆರಳುವಂತೆ ತಿಳಿಸಿದ್ದಾರೆ. ಯಜಮಾನ ಮನೆಗೆ ಬಂದು ನೋಡಿದಾಗ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವಿವರಿಸಿದರು.

ಮನೆಯ ಯಜಮಾನ ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 13 ಅಡಿ ಕೊಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬಾಲಕಿಯನ್ನು ಕೊಲೆಗೈದ ಆರೋಪಿ ಬಗ್ಗೆ ಮಹತ್ತರ ಸುಳಿವು ಲಭಿಸಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆಯೇ ಎಂಬ ಆಯಾಮದಲ್ಲಿಯೂ ಸಹಾ ತನಿಖೆ ನಡೆಸಲಾಗುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳದಲ್ಲಿ ಕೆಲ ಪುರಾವೆ ಸಂಗ್ರಹಿಸಿದ್ದಾರೆ. ಅವರ ವರದಿ ಕೈ ಸೇರಿದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.