ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಯಕ್ಷಗಾನವಷ್ಟೇ ಅಲ್ಲ, ಸಾಹಿತ್ಯ ಸಂಸ್ಕೃತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೂ ಉತ್ತಮ ಕೆಲಸ ಮಾಡುತ್ತಬಂದಿದೆ. ಈ ಪ್ರತಿಷ್ಠಾನವು ” ಯಕ್ಷಾನುಗ್ರಹ ” ಎಂಬ ವಾಟ್ಸಪ್ ಮೂಲಕವೇ ಅನೇಕ ಉಪಯುಕ್ತ ಕಾರ್ಯ ಮಾಡಿರುವುದು ನಾವು ನಮ್ಮ ಕೈಯಲ್ಲಿರುವ ಮೊಬೈಲನ್ನು ( ಸ್ಮಾರ್ಟ್ ಫೋನ್) ಯಾವ ರೀತಿ ಸದ್ಬಳಕೆ/ ಸದುಪಯೋಗ ಮಾಡಬಹುದೆನ್ನುವುದಕ್ಕೆ ಒಂದು ಮಾದರಿ. ಈ ವಾಟ್ಸಪ್ ಮೂಲಕವೇ ಕರೋನಾ ಕಾಲದಲ್ಲಿ ನೂರಿನ್ನೂರು ಯಕ್ಷಗಾನ ಕಲಾವಿದರ ಜೀವನ ಸಾಧನೆಗಳನ್ನು ಸಂಗ್ರಹಿಸುವ/ ದಾಖಲಿಸುವ ಮಹತ್ಕಾರ್ಯ ಮಾಡಿದೆ. ಅವು ನಾಲ್ಕು ಸಂಪುಟಗಳಲ್ಲಿ ಪ್ರಕಟವೂ ಆಗಿವೆ.

ಭಾಷಾ ಪಂಡಿತರಾದ ಕೊಕ್ಕಡ ವೆಂಕಟ್ರಮಣ ಭಟ್ಟ , ಮಂಡ್ಯ ಅವರ ” ಸರಿಗನ್ನಡ- ಸರಿಕನ್ನಡ” ಸಹ ಮೊದಲು ವಾಟ್ಸಪ್ ನಲ್ಲಿ ಬಂದು ನಂತರ ಪುಸ್ತಕವಾಗಿದೆ. ಈಚಿನ ಕೆಲ ದಶಕಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆಯೆನ್ನುವುದು ಎಷ್ಟು ನಿಜವೋ, ಸಾಹಿತಿಗಳಾದವರು/ ಶಿಕ್ಷಕರಾದವರು ಸಹ ಕನ್ನಡ ಶಬ್ದಗಳನ್ನು ತಪ್ಪಾಗಿ ಬಳಸುತ್ತಿರುವುದೂ ಅಷ್ಟೇ ಸತ್ಯ. ಓದಿನ ಕೊರತೆಯೇ ಅದಕ್ಕೆ ಮುಖ್ಯ ಕಾರಣ. ಭಾಷೆಯ ಮೇಲೆ ಹಿಡಿತ ಸಾಧಿಸದೇ ಬರೆಯಲು ಹೊರಟಾಗ ತಪ್ಪು ಶಬ್ದ ಪ್ರಯೋಗಗಳು ನಡೆಯುವುದೂ ಸಹಜ. ಕನಿಷ್ಠ ಪಕ್ಷ ಸಾಹಿತಿಗಳೆನಿಸಿಕೊಳ್ಳಬಯಸುವವರಾದರೂ ತಪ್ಪು ಶಬ್ದ ಬಳಸಬಾರದು ಎಂಬ ಎಚ್ಚರ ಅಗತ್ಯ. ನಾವು ಬೇರೆಯವರಿಗೆ ಸರಿಯಾದ ಶಬ್ದ ಬಳಸಲು ಕಲಿಸಬೇಕಾದ ಸ್ಥಾನದಲ್ಲಿದ್ದೇವೆ. ನಾವೇ ಅಶುದ್ಧವಾಗಿ ಬರೆದರೆ ಹೇಗೆ?
ಈ ” ಸರಿಗನ್ನಡ- ಸರಿಕನ್ನಡ” ಸಾಮಾನ್ಯವಾಗಿ ಬಹಳಷ್ಟು ಜನ ದಿನನಿತ್ಯದ ತಮ್ಮ ಬರೆಹದಲ್ಲಿ ಬಳಸುವ ತಪ್ಪು ಶಬ್ದಗಳನ್ನೆತ್ತಿಕೊಂಡು ಅವುಗಳ ಸರಿಯಾದ ಸ್ವರೂಪವನ್ನೂ ತೋರಿಸಿಕೊಡುತ್ತಿದೆ. ಅಗತ್ಯ ವಿವರಣೆಗಳೂ ಇವೆ. ಇದು ಭಾಷಾಭ್ಯಾಸಿಗಳಿಗೆ, ವಿಶೇಷವಾಗಿ ಲೇಖಕರಿಗೆ, ಶಿಕ್ಷಕರಿಗೆ, ತಾಳಮದ್ದಲೆ- ಯಕ್ಷಗಾನ ಕಲಾವಿದರಿಗೆ ಮಾರ್ಗದರ್ಶಿಯಾದ ಪುಸ್ತಕ.
ಮೊದಲ ೧೨೫ ಪುಟಗಳತನಕ ಸರಿ-ತಪ್ಪು ಶಬ್ದಗಳು, ನಂತರ ಪದವಿಶೇಷ, ಅನುಸ್ವಾರ, ವಿಸರ್ಗ, ಸಮಾಸ ಪದಗಳು, ದ್ವಿರುಕ್ತಿ, ನುಡಿಗಟ್ಟುಗಳ ಬಳಕೆ, ಅನುಕರಣ ಅವ್ಯಯ, ಸಂಖ್ಯಾವಾಚಕ ಶಬ್ದಗಳು, ಇತರ ವಿಷಯಗಳು ಎಂಬ ವಿಭಾಗಗಳಿವೆ.
ಸರಿಯಾದ ಶಬ್ದ ಮತ್ತು ತಪ್ಪು ಬಳಕೆಯ ಶಬ್ದಗಳನ್ನು ವಿವರಣೆಗಳೊಂದಿಗೆ ನೀಡಲಾಗಿದ್ದು ಯಾಕೆ/ ಹೇಗೆ ತಪ್ಪು ಎನ್ನುವುದನ್ನು ಹೇಳಲಾಗಿದೆ.
ಉದಾಹರಣೆಗೆ – ಅನ್ನವನ್ನು ತಿನ್ನುವುದು ಎಂಬ ತಪ್ಪು ಪ್ರಯೋಗ. ಅನ್ನವನ್ನು ಉಣ್ಣುವುದು – ಇದು ಸರಿ.
* ಮನರಂಜನೆ ತಪ್ಪು/ ಮನೋರಂಜನೆ ಸರಿ.
* ಅಮವಾಸ್ಯೆ ತಪ್ಪು/ ಅಮಾವಾಸ್ಯೆ ಸರಿ.
* ಅರವಳಿಕೆ ತಪ್ಪು/ ಅರಿವಳಿಕೆ ಸರಿ
* ಕಾತ್ಯಾಯಿನಿ ತಪ್ಪು/ ಕಾತ್ಯಾಯನಿ ಸರಿ.
* ಕೂಲಂಕುಶ ತಪ್ಪು/ ಕೂಲಂಕಷ ಸರಿ.
* ಪ್ರಲ್ಹಾದ ತಪ್ಪು/ ಪ್ರಹ್ಲಾದ ಸರಿ.
ಹೀಗೆ ತಪ್ಪಾಗಿ ಬಳಸುವ ಶಬ್ದಗಳ ಸರಿಯಾದ ಸ್ವರೂಪವನ್ನು ಇಲ್ಲಿ ನೀಡಲಾಗಿದ್ದು , ಈ ಪುಸ್ತಕವನ್ನು ಓದಿ ನಾವೆಷ್ಟು ತಪ್ಪು ಮಾಡುತ್ತೇವೆ ಎನ್ನುವುದನ್ನು ಸಹ ನಾವೇ ತಿಳಿದುಕೊಳ್ಳುವುದು ಉತ್ತಮ. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದವರು , ತಾವು ತಪ್ಪೇ ಮಾಡುವುದಿಲ್ಲವೆಂದು ಭಾವಿಸಿಕೊಂಡವರು ಸಹ ಇದನ್ನು ಓದುವುದು‌ ಒಳ್ಳೆಯದು. ಶುದ್ಧ ಭಾಷೆಯನ್ನು ಸಾಕಷ್ಟು ಅಭ್ಯಾಸ ಮಾಡಿರುವ ನನಗೂ ಕೆಲವೊಮ್ಮೆ ಸಂಶಯ ಬರುವುದುಂಟು. ಆಗ ನಾನು ಕೂಡಲೇ ಶಬ್ದಕೋಶ ನೋಡಿ ದೃಢ ಪಡಿಸಿಕೊಳ್ಳುತ್ತೇನೆ. ( ಕೆಲವರು ಧೃಡ ಎಂದೂ‌ ಬರೆಯುತ್ತಾರಲ್ಲವೆ?)
ಪ್ರತಿಷ್ಠಾನದಿಂದ, ಕೊಕ್ಕಡರಿಂದ ಒಂದು ಪ್ರಶಂಸನೀಯ ಕಾರ್ಯ ಆಗಿದೆ. ಆಸಕ್ತರು ತರಿಸಿಕೊಂಡು ಓದಿ. ಸಂಪರ್ಕಕ್ಕೆ
ಮೊ. ನಂ. 9448344380/8073740237

✒️ಎಲ್. ಎಸ್. ಶಾಸ್ತ್ರಿ