ಬೆಳಗಾವಿ: ಎಮ್ಮೆ ಮಾರಿ ಅದರಿಂದ ಬಂದ ಹಣವನ್ನು ಕುಡಿತಕ್ಕೆ ಗಂಡ ಖರ್ಚು ಮಾಡಿದ್ದಾನೆ. ಇದನ್ನು ಆಕ್ಷೇಪಿಸಿದ ಹೆಂಡತಿಯನ್ನು ಕೊಂದು ತಾನೂ ಸಹಾ ನೇಣಿಗೆ ಶರಣಾಗಿದ್ದಾನೆ. ಮೂಡಲಗಿ ತಾಲೂಕಿನ ಪುಲಗಡ್ಡಿ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ.

ಅಣ್ಣಪ್ಪ ನಂದಿ, ಯಲ್ಲವ್ವ ನಂದಿ(41) ದುರಂತ ಅಂತ್ಯ ಕಂಡ ಗಂಡ-ಹೆಂಡತಿ. ತನ್ನಲ್ಲಿದ್ದ ಎಮ್ಮೆಯನ್ನು‌ ಮಾರಿ ಬಂದ ಹಣದಿಂದ ಅಣ್ಣಪ್ಪ ಕಂಠಪೂರ್ತಿ ಕುಡಿದು ಬಂದಿದ್ದ. ನಿನ್ನೆ ಸಂಜೆ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಯಲ್ಲವ್ವ ನಂದಿ, ಗಂಡನ ಈ ನಡತೆಯನ್ನು ಆಕ್ಷೇಪಿಸಿದ್ದಳು.

ಇದರಿಂದ ಜಗಳವಾಗಿದೆ. ಹೆಂಡತಿಯ ಮೇಲೆ‌ ಮೊದಲೇ ಸಂಶಯ ಪಡುತ್ತಿದ್ದ ಅಣ್ಣಪ್ಪ, ಹೆಂಡತಿ ಪ್ರಶ್ನೆ ಮಾಡುತ್ತಿದ್ದಂತೆ ಆಕೆಯನ್ನು ಕೊಂದು ಹಾಕಿದ್ದಾನೆ, ನಂತರ ಮನೆಗೆ ಬಂದು ಮನೆಯ ಹೊರ ಭಾಗದ ತಗಡಿನ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.