
ಬೆಂಗಳೂರು: ಬಹುಭಾಷಾ ರಶ್ಮಿಕಾ ಮಂದಣ್ಣ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆಯಲಾಗಿದೆ.
ರಶ್ಮಿಕಾ ಮಂದಣ್ಣ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದೆ.
ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅವರು ತಾನು ಹೈದರಾಬಾದ್ ಹುಡುಗಿ ಎಂದು ಹೇಳಿದ್ದರು.
ರಶ್ಮಕಾ ಕುರಿತು ಕಾಂಗ್ರೆಸ್ ಶಾಸಕ ರವಿ ಗಣಿಗ ನಾವು ರಶ್ಮಿಕಾ ಅವರನ್ನು ಬೆಂಗಳೂರು ಚಲನಚಿತ್ರೋತ್ಸವಕ್ಕೆ ಕರೆದಿದ್ದೆವು. ಆದರೆ, ಅವರು ನಮ್ಮ ಆಹ್ವಾನವನ್ನು ತಿರಸ್ಕರಿಸಿದರು. ಆಮಂತ್ರಣವಿದ್ದರೂ ರಶ್ಮಿಕಾ ಚಿತ್ರೋತ್ಸವಕ್ಕೆ ಹಾಜರಾಗಿಲ್ಲ. ಹೀಗಾಗಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಹೇಳಿ ಟೀಕಿಸಿದ್ದರು. ಇದಲ್ಲದೆ ಕನ್ನಡ ಹೋರಾಟಗಾರ ಟಿಎ ನಾರಾಯಣ ಗೌಡ ಅವರು ಕೂಡ ರಶ್ಮಿಕಾ ಅವರನ್ನು ಟೀಕಿಸಿದ್ದರು.
ಈ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ರಶ್ಮಿಕಾ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದಿದೆ.
ಪತ್ರದಲ್ಲಿ ಏನಿದೆ?:
ಕೊಡುವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್. ಯು. ನಾಚಪ್ಪ ಅವರು ಪತ್ರ ಬರೆದಿದ್ದು, “ಶಾಸಕರೊಬ್ಬರು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದು, ಇದನ್ನು ಕೊಡವರು “ಗೂಂಡಾಗಿರಿ” ಎಂದು ಪರಿಗಣಿಸುತ್ತಾರೆ. ಸ್ಥಳೀಯ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿರುವ ರಶ್ಮಿಕಾ ಸಾಕಷ್ಟು ಪರಿಶ್ರಮ ಪಟ್ಟು ತನ್ನ ಪ್ರತಿಭೆಯಿಂದ ಯಶಸ್ವಿಯಾಗಿ ಬೆಳೆದಿದ್ದಾರೆ. ಅವರು ಅಮಿತಾಬ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಅವರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ರಶ್ಮಿಕಾ ಅವರು ಸ್ವಂತ ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದು, ಅದನ್ನು ಗೌರವಿಸಬೇಕು. ಅದನ್ನು ಬಿಟ್ಟು ಯಾರೋ ಒಬ್ಬರ ಸೂಚನೆಯಂತೆ, ನಿರೀಕ್ಷೆಯಂತೆ ಇರಬೇಕು ಎಂದು ಒತ್ತಡ ಹೇರಬಾರದು. ಅಲ್ಲದೇ ಕೇವಲ ರಶ್ಮಿಕಾ ಅವರ ಸಮುದಾಯದ ಕಾರಣದಿಂದ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಅರ್ಥ ಬರುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ.