ಕಾರವಾರ: ಹಣಕೋಣದಲ್ಲಿ ನಡೆದ ಉದ್ಯಮಿ ವಿನಾಯಕ ನಾಯ್ಕ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದ್ದ ಗುರುಪ್ರಸಾದ್ ರಾಣೆ ಎಂಬಾತರು ನದಿಗೆ ಹಾರಿ ಜೀವಬಿಟ್ಟಿದ್ದಾರೆ.

ಗೋವಾದ ಮಾಂಡವಿ ನದಿಯಲ್ಲಿ ಗುರುಪ್ರಸಾದ ರಾಣೆ ಅವರ ಶವ ಪತ್ತೆಯಾಗಿದೆ. ವಿನಾಯಕ ನಾಯ್ಕ ಹಾಗೂ ಗುರುಪ್ರಸಾದ ನಡುವೆ ವೈಷಮ್ಯವಿದ್ದು, ಇದೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿತ್ತು. ಪೂಣಾದಲ್ಲಿ ವಾಸವಿದ್ದ ವಿನಾಯಕ ನಾಯ್ಕ ಗಣೇಶ ಹಬ್ಬ ಹಾಗೂ ದೇವಿ ಜಾತ್ರೆಗಾಗಿ ಊರಿಗೆ ಬಂದಾಗ ಹತ್ಯೆಗೆ ಒಳಗಾಗಿದ್ದರು. ಸೆ 22ರಂದು ವಿನಾಯಕ ನಾಯ್ಕ ಅವರ ಮನೆಯಲ್ಲಿಯೇ ಕೊಲೆಯಾಗಿದ್ದು, ನಾಲ್ವರು ದುಷ್ಕರ್ಮಿಗಳು ಚಾಕು, ಕಬ್ಬಿಣ, ತಲ್ವಾ‌ರ್’ನಿಂದ ಕೊಚ್ಚಿ ಸಾಯಿಸಿದ್ದರು.

ಪ್ರಸ್ತುತ ಆತ್ಮಹತ್ಯೆಗೆ ಶರಣಾಗಿರುವ ಗುರುಪ್ರಸಾದ ಕಾರವಾರದ ಹಳಗಾ ಮೂಲದವರು. ಗೋವಾದಲ್ಲಿ ಅವರು ಸಹ ಉದ್ದಿಮೆ ನಡೆಸುತ್ತಿದ್ದರು.