ಇಂದು ರವೀಂದ್ರನಾಥ ಟಾಗೋರ್ ಅವರ ಜನ್ಮದಿನ. ಅವರು ಕಾರವಾರಕ್ಕೂ ಬಂದಿದ್ದರು ಮತ್ತು ಕಾರವಾರದ ಕಡಲ ತೀರದ ಸೌಂದರ್ಯಕ್ಕೆ ಮರುಳಾಗಿದ್ದರು. ಅಂಕೋಲೆಯ ಶ್ರೀ ಸ. ಪ. ಗಾಂವಕರ ಅವರು ಟಾಗೋರರ ಗೀತಾಂಜಲಿ ಯನ್ನು ಕನ್ನಡಕ್ಕೆ ತಂದಿದ್ದಾರೆ. ಹಾಗೆಯೇ ಪ್ರಹ್ಲಾದ ನರೇಗಲ್, ಶ್ರೀ ವಿ. ಎಂ. ಶೆಟ್ಟರ್ ಎಂಬವರು ಸಹ ಭಾವಾನುವಾದ ಮಾಡಿದ್ದಾರೆ. ಟಾಗೋರ್ ಅವರ ಅಪಾರ ಬಂಗಾಲಿ ನಾಡುನುಡಿಯ ಅಭಿಮಾನ, ಪ್ರೀತಿ ಅ. ನ. ಕೃಷ್ಣರಾಯರಲ್ಲೂ ಕನ್ನಡ ಪ್ರೇಮ ಹುಟ್ಟಲು ಪ್ರೇರಣೆ ನೀಡಿತೆಂಬುದು ಉಲ್ಲೇಖನೀಯ.
ಟಾಗೋರರ ಗೀತಾಂಜಲಿ ೧೯೧೨ ರಲ್ಲಿ ಪ್ರಕಟಗೊಂಡು ಮರುವರ್ಷವೇ ಜಾಗತಿಕ ಪ್ರತಿಷ್ಠೆಯ ನೋಬೆಲ್ ಸಾಹಿತ್ಯ ಪುರಸ್ಕಾರ ಪಡೆಯಿತು. ಗೀತಾಂಜಲಿಯ ಇಂಗ್ಲೀಷ ಆವೃತ್ತಿಗೆ ಖ್ಯಾತ ಆಂಗ್ಲ ಕವಿ W. B. Yeats ಮುನ್ನುಡಿ ಬರೆದಿದ್ದರೆಂಬುದು ಗಮನಾರ್ಹ. ಅದು ಜಗತ್ತಿನ ವಿವಿಧ ಭಾಷೆಗಳಿಗೆ ಅನುವಾದವಾಗಿ ನೂರಾರು ಆವೃತ್ತಿಗಳನ್ನು ಕಂಡಿದೆ. ಗೀತಾಂಜಲಿ ವಾಸ್ತವದಲ್ಲಿ ” ಗ-ಪದ್ಯ” ಅಂದರೆ ಕಾವ್ಯಮಯ ಗದ್ಯ. ಇಲ್ಲಿ ಭಾವನೆಗಳಿಗೆ ಕಾವ್ಯದ ಭಾಷೆ ಬಳಸಲಾಗಿದೆ.
ಈ ಸಂದರ್ಭದಲ್ಲಿ ಗೀತಾಂಜಲಿಯ ಒಂದು ಪದ್ಯ ಇಲ್ಲಿ ನೀಡುವ ಮೂಲಕ ವಿಶ್ವ ಕವಿಗೆ ನಮನ.
” ದಣಿವು ನಿನ್ನ ಹೃದಯದಲ್ಲಿದೆ. ನಿದ್ದೆ ನಿನ್ನ ಕಣ್ಣುಗಳಲ್ಲಿದೆ.
ಹೂವು ಮುಳ್ಳುಗಳ ಮಧ್ಯೆ ವೈಭವದಿಂದ ಆಡಳಿತ ನಡೆಸುತ್ತಿದೆ ಎಂಬ ಸುದ್ದಿ ನಿನಗೆ ತಲುಪಿಲ್ಲವೇ? ಎಚ್ಚರಾಗು, ಓ, ಎದ್ದೇಳು.ವೇಳೆ ನಿರರ್ಗಳವಾಗಿ ಹೋಗದಿರಲಿ.
ಈ ಕಲ್ಲುದಾರಿಯ ಕೊನೆಗೆ ಶುದ್ಧ ಏಕಾಂತದ ಪ್ರದೇಶದಲ್ಲಿ ನನ್ನ ಗೆಳೆಯ ಒಬ್ಬಂಟಿಯಾಗಿ ಕುಳಿತಿರುತ್ತಾನೆ. ಅವನನ್ನು ಮೋಸ ಪಡಿಸುವದು ಬೇಡ. ಎಚ್ಚರಾಗು, ಓ, ಎದ್ದೇಳು!
ಮಧ್ಯಾಹ್ನದ ಸೂರ್ಯನ ಶಾಖದಿಂದ ಆಕಾಶ ತೇಕಿದರೆ, ನಡುಗಿದರೆ ಏನು, ಸುಡುತ್ತಿರುವ ಮರಳು ತನ್ನ ನೀರಡಿಕೆಯ ಹೊದಿಕೆಯನ್ನು ಹರಡಿದರೆ ಏನು, ನಿನ್ನ ಹೃದಯದ ಆಳದಲ್ಲಿ ಖುಷಿ ಇಲ್ಲವೇ? ನಿನ್ನ ಪ್ರತಿಯೊಂದು ಹೆಜ್ಜೆಗೆ ಹಾದಿಯ ವೀಣೆ ದು: ಖಮಯ ಮಧುರ ಸಂಗೀತವನ್ನು ಹೊರಹೊಮ್ಮಿಸಲಾರದೆ!
– ಟಾಗೋರ್ ( ಶೆಟ್ಟರ್)