ಬೆಂಗಳೂರು : ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಸಾಕ್ಷಿಯಾಗಿ ಪರಿಗಣಿಸಲ್ಪಟ್ಟಿರುವ ಆತನ ಮೊಬೈಲ್ ಗೆ ಪೊಲೀಸರು ಭಾರೀ ಶೋಧ ನಡೆಸಿದ್ದಾರೆ.
ಆದರೆ ಸುಮನಹಳ್ಳಿಯ ರಾಜಕಾಲುವೆ ಬಳಿ ಎಸೆದಿದೆ ಎನ್ನಲಾಗಿರುವ ಮೊಬೈಲ್ ಶೋಧನೆಗೆ ಬಿಬಿಎಂಪಿ ಸಿಬ್ಬಂದಿ ಶೋಧ ನಡೆಸಿದ್ದರೂ ಇದುವರೆಗೆ ಯಾವ ಪ್ರಯೋಜನ ಆಗಿಲ್ಲ. ಸುಮಾರು ಹತ್ತಕ್ಕೂ ಹೆಚ್ಚು ಪೌರ ಕಾರ್ಮಿಕರು ಸುಮನಹಳ್ಳಿ ರಾಜಕಾಲುವೆಯಲ್ಲಿ 3:00 ಗಂಟೆಗೂ ಹೆಚ್ಚು ಕಾಲ 200 ಮೀಟರ್ ವ್ಯಾಪ್ತಿಯಲ್ಲಿ ಶೋಧನೆ ನಡೆಸಿದ್ದಾರೆ. 10 ದಿನ ಕಳೆದರೂ ಮೊಬೈಲ್ ಪತ್ತೆಯಾಗಿಲ್ಲ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊಬೈಲ್ ಮಹತ್ವದ ಸಾಕ್ಷ್ಯ ಎನ್ನಲಾಗಿದೆ. ಆರೋಪಿಗಳು ಕೊಲೆಗೂ ಮೊದಲು ರೇಣುಕಾ ಸ್ವಾಮಿಯಿಂದ ಪವಿತ್ರ ಗೌಡರಿಗೆ ಕ್ಷಮೆ ಕೇಳುವ ವಿಡಿಯೋವನ್ನು ರೇಣುಕಾ ಸ್ವಾಮಿಯ ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು.
ರೇಣುಕಾ ಸ್ವಾಮಿ ಮೊಬೈಲ್ ಟವರ್ ಲೊಕೇಶನ್ ಪರಿಶೀಲಿಸಿದಾಗ ರಾಜ ಕಾಲುವೆ ಬಳಿ ಕಂಡುಬಂದಿದೆ. ಈ ನಿಟ್ಟಿನಲ್ಲಿ ಇದೀಗ ಪೊಲೀಸರು ಮೊಬೈಲ್ ಪತ್ತೆಗೆ ಶೋಧನೆ ತೀವ್ರಗೊಳಿಸಿದ್ದಾರೆ.