ವಯನಾಡು: ಭೂಕುಸಿತದಿಂದ ಧ್ವಂಸಗೊಂಡ ಕೇರಳದ ವಯನಾಡಿನಿಂದ ಸಾವು ಮತ್ತು ಹತಾಶೆಯ ಕಥೆಗಳು ಒಂದೊಂದೇ ಬೆಳಕಿಗೆ ಬರುತ್ತಿದೆ. ಒಬ್ಬ ಮಹಿಳೆ ತನ್ನ ಚಿಕ್ಕ ಮೊಮ್ಮಗಳ ಜೊತೆಗೆ ದುರಂತದಿಂದ ಪಾರಾಗಿರುವುದು ಹಾಗೂ ಅದರ ನಂತರ ಅವರಿಬ್ಬರು ಮಳೆ ಮತ್ತು ವಿಪತ್ತಿನ ಆ ರಾತ್ರಿಯಲ್ಲಿ ಕಾಡಿನಲ್ಲಿ ಕಾಡಾನೆ ಪಕ್ಕದಲ್ಲೇ ಕಳೆದಿದ್ದನ್ನು ವಿವರಿಸಿದ್ದಾಳೆ ಹಾಗೂ ಅವರನ್ನು ಕಾಪಾಡಿದ್ದಕ್ಕಾಗಿ ಆಕೆ ಆನೆಗೆ ಕೃತಜ್ಞತೆ ಸಲ್ಲಿಸಿದ್ದಾಳೆ.
ಜುಲೈ 30ರಂದು ರಾತ್ರಿ ಸಮಯದಲ್ಲಿ ಚೂರಲ್‌ಮಲಾದಲ್ಲಿ ಸುಜಾತಾ ಮನೆಯಲ್ಲಿ ಮಲಗಿದ್ದಾಗ ಅಪರಿಚಿತ ಶಬ್ದ ಕೇಳಿದೆ. ಎಚ್ಚರಗೊಳ್ಳುತ್ತಿದ್ದಂತೆ, ನೆಲದ ಬಿರುಕುಗಳ ಮೂಲಕ ಮಣ್ಣು ಮತ್ತು ಜಲ್ಲಿಕಲ್ಲುಗಳು ಬೀಳುವುದನ್ನು ನೋಡಿದ್ದಾಳೆ ಮತ್ತು ಕೆಲವೇ ನಿಮಿಷಗಳಲ್ಲಿ, ಮನೆಯ ಮೇಲ್ಛಾವಣಿಯು ಕುಸಿದು, ಎದೆಯ ಆಳದ ಅವಶೇಷಗಳಲ್ಲಿ ಅವಳು ಸಿಕ್ಕಿಬಿದ್ದಿದ್ದಳು.. ಅವಳು ತನ್ನನ್ನು ತಾನೇ ಸಾವರಿಸಿಕೊಂಡು ಎದ್ದಾಗ ಮೊಮ್ಮಗಳು ಮೃದುಲಾ ಸಹಾಯಕ್ಕಾಗಿ ಅಳುವುದು ಅವಳಿಗೆ ಕೇಳಿಸಿತು.
“ನಾನು ಹೇಗೋ ಅವಳನ್ನು ಎಳೆದುಕೊಂಡ ನಂತರ ನನ್ನ ಮೇಲೆ ಬೀಳುವ ಸ್ಥಿತಿಯಲ್ಲಿದ್ದ ಬೃಹತ್ ಮರದ ತೊಗಟೆಯನ್ನು ವಿರುದ್ಧ ದಿಕ್ಕಿಗೆ ತಳ್ಳಿದೆ. ನಾವು ತೆವಳುತ್ತಾ ಹೋಗಿ ಮನೆಯಿಂದ ಹೊರಬಂದೆವು. ನೀರಿನಲ್ಲಿ ನಾನು ಈಜುತ್ತಿದ್ದೆ, ನನ್ನ ಮಗುವನ್ನು ಬಿಗಿಯಾಗಿ ತಬ್ಬಿಕೊಂಡು ಈಜುತ್ತಿದ್ದೆ. ನಮಗೆ ಅಂತಿಮವಾಗಿ ನೆಲ ಸಿಕ್ಕಿತು. ಮೇಲಕ್ಕೆ ಏರಿದಾಗ, ನಾವು ಸುರಕ್ಷಿತವಾಗಿರುತ್ತೇವೆ ಎಂದು ನಮಗೆ ಅನ್ನಿಸಿತು. ಅದು ಎತ್ತರದ ಬೆಟ್ಟದ ಜಾಗವಾಗಿತ್ತು. ಹೇಗೋ ಸಾವರಿಸಿಕೊಂಡು ಭಾರೀ ಮಳೆಯಲ್ಲೇ ಏನಾದರೂ ಆಸರೆ ಅಥವಾ ಸಹಾಯಕ್ಕೆ ಏನಾದರೂ ಸಿಗಬಹುದು ಎಂದು ಹುಡುಕಲು ಪ್ರಯತ್ನಿಸಿದೆವು. ಆದರೆ ಒಮ್ಮೆಲೇ ಭಯವಾಯ್ತು. ಯಾಕೆಂದರೆ ಮೂರು ದೈತ್ಯ ಆನೆಗಳು ನಮ್ಮ ಮುಂದೆ ನಿಂತಿದ್ದವು, ಅವುಗಳಲ್ಲಿ ಒಂದು ನನ್ನ ಕಣ್ಣಮುಂದೆಯೇ ನಿಂತಿವೆ ಎಂದು ಸುಜಾತಾ ಮಾಧ್ಯಮಗಳಿಗೆ ತಿಳಿಸಿದರು.
ದೈತ್ಯ ಪ್ರಾಣಿಯ ಮುಂದೆ ಕರುಣೆ ತೋರು ಎಂದು ಬೇಡಿಕೊಂಡೆ. ಅಸಾಹಕತೆ ಮಧ್ಯೆಯೇ ನನಗೆ ಅತೀವ ಭಯವೂ ಆವರಿಸಿತು. ದೇವರನ್ನು ಪ್ರಾರ್ಥಿಸಿದೆ ಎಂದು ತಿಳಿಸಿದರು.ಮೃದುಲಾ ಜೊತೆ ತಾಳೆ ಮರದ ಕೆಳಗೆ ಆಶ್ರಯ ಪಡೆದ ಸುಜಾತಾ ಆನೆ ಮುಂದೆ ಅಕ್ಷರಶಃ ಅಂಗಲಾಚಿದೆ ಎಂದು ಹೇಳಿದ್ದಾರೆ. “ನಾವು ಸಾವಿನಿಂದ ಪಾರಾಗಿ ಇಲ್ಲಿಗೆ ಬಂದಿದ್ದೇವೆ. ದಯವಿಟ್ಟು ನಮಗೆ ತೊಂದರೆ ಕೊಡಬೇಡ ಎಂದು ಆನೆ ಮುಂದೆ ಬೇಡಿಕೊಂಡೆ ಎಂದು ತಿಳಿಸಿದ್ದಾರೆ.
ಸಂವೇದನಾಶೀಲ ಜೀವಿಗಳೂ ಹೌದು. ಬಹುಶಃ ಭೂ ಕುಸಿತದ ಭಯಾನಕ ಅನುಭವ ಈ ಆನೆಗಳಿಗೂ ಆಗಿರಬಹುದು. ಸುಜಾತಾ ಅಣಿನಂಚಿರ ಹಾಗೂ ಮೊಮ್ಮಗಳಿಗೆ ಇದ್ದ ಭಯ ಆನೆಗಳಿಗೆ ಗೊತ್ತಿರಲಿಲ್ಲ ಎಂದಲ್ಲ. ಆನೆಗಳು ಬಹಳ ಬುದ್ಧಿವಂತ ಜೀವಿಗಳು ಹಾಗೂ ಹೆಚ್ಚು ಸಂವೇದನಾಶೀಲ ಪ್ರಾಣಿಗಳು. ಇವರನ್ನು ರಕ್ಷಣಾ ಪಡೆಗಳು ರಕ್ಷಣೆ ಮಾಡುವವರೆಗೂ ಆನೆಗಳು ಇವರ ಪಕ್ಕದಲ್ಲೇ ನಿಂತಿದ್ದವಂತೆ. ಈ ಆನೆಗಳು ಬೆಳಗಿನ ಜಾವ 6 ಗಂಟೆಗೆ ಬೆಳಕು ಮೂಡಿ ಸೇನೆಯವರು ರಕ್ಷಣೆಗೆ ಬರುವ ವರೆಗೂ ಅವುಗಳು ನಿಂತಲ್ಲಿಯೇ ನಿಂತು ಇವರನ್ನು ಕಾಯುತ್ತಿದ್ದವು…! ಮರುದಿನ ಮುಂಜಾನೆ ರಕ್ಷಣಾ ಕಾರ್ಯಕರ್ತರು ಅವರನ್ನು ಹುಡುಕುವವರೆಗೂ ಅವಳು ಮತ್ತು ಮೊಮ್ಮಗಳು ಮರದ ಕೆಳಗೆ ವಿಶ್ರಮಿಸುತ್ತಿದ್ದಾಗ ಆನೆಯು ಕಾವಲು ಕಾಯುತ್ತಾ ನಿಂತಿತ್ತು ಎಂದು ಅವಳು ಹೇಳಿದ್ದಾಳೆ. ಅಕ್ಕಪಕ್ಕದಲ್ಲಿ ಇನ್ನೂ ಎರಡು ಆನೆಗಳು ತಾಳೆಗರಿಗಳನ್ನು ಮೆಲ್ಲುತ್ತಿದ್ದವು. ಆದರೆ ಆನೆ ಎದುರಿಗೆ ತಾನು ರಾತ್ರಿಯಿಡೀ ನಿಂತೇ ಇದ್ದೆ. ಆನೆಗಳು ಸಹ ಭಾವುಕವಾಗಿದ್ದವು, ಅವುಗಳ ಕಣ್ಣಂಚಿನಲ್ಲಿ ನೀರು ಇತ್ತು. ನಾನು ಅತ್ಯಂತ ಸನಿಹದಿಂದ ನೋಡಿದೆ ಎಂದು ಸುಜಾತಾ ಅಣಿನಂಚಿರ ಹೇಳಿದ್ದಾರೆ.ನಿರಾಶ್ರಿತರ ಶಿಬಿರದಲ್ಲಿ ತಾತ್ಕಾಲಿಕವಾಗಿ ರಕ್ಷಣೆ ಪಡೆದಿರುವ ಸುಜಾತಾ ಕುಟುಂಬ ಸೋಮವಾರ ರಾತ್ರಿಯ ಕರಾಳ ನೆನಪುಗಳ ಭಯದಲ್ಲೇ ಈಗಲೂ ಇದ್ದಾರೆ..
ಇತ್ತೀಚಿನ ಭೂಕುಸಿತದಿಂದ ವಯನಾಡಿನಲ್ಲಿ ಚೂರಲ್ಮಲಾ ಅತ್ಯಂತ ಕೆಟ್ಟದಾಗಿ ನಾಶವಾದ ಪ್ರದೇಶಗಳಲ್ಲಿ ಒಂದಾಗಿದೆ. ಮೃದುಲಾಳನ್ನು ಹಿಡಿದುಕೊಂಡು ಕುಸಿದು ಬಿದ್ದ ಮನೆಯಿಂದ ಹೊರಗೆ ಜಿಗಿಯುವಾಗ ಸಹಾಯಕ್ಕೆ ಅಕ್ಕಪಕ್ಕದವರೂ ಇರಲಿಲ್ಲ, ಕರೆಯುವವರೂ ಇರಲಿಲ್ಲ ಎಂದು ಸುಜಾತಾ ನೆನಪಿಸಿಕೊಂಡರು. ಎಲ್ಲ ಪ್ರದೇಶವೂ ಒಂದು ದೊಡ್ಡ ನದಿಯಾಗಿ ವಿಲೀನಗೊಂಡಿತು, ಮನೆಗಳು ಮತ್ತು ಗಿಡಮರಗಳನ್ನು ಕೊಚ್ಚಿಕೊಂಡು ಹೋಯಿತು ಎಂದು ಅವರು ಭಯಾನಕ ಘಟನೆಯನ್ನು ನೆಪಿಸಿಕೊಂಡಿದ್ದಾರೆ.
ಸೋಮವಾರ ಮಧ್ಯ ರಾತ್ರಿ ಕಳೆದ ಬಳಿಕ ಬೆಳಗಿನ ಜಾವ 1: 30ರ ಸುಮಾರಿಗೆ ಭಾರೀ ಪ್ರಮಾಣದ ನೀರು ಸುಜಾತಾ ಅವರ ಮನೆಗೆ ನುಗ್ಗಿತ್ತು. ನಾನು ಮತ್ತು ನನ್ನ ಕುಟುಂಬದ ನಾಲ್ವರು ಸದಸ್ಯರು ಅಲ್ಲಿ ಸಿಕ್ಕಿ ಬಿದ್ದೆವು. ಅಲ್ಲಿದ್ದದ್ದು ನಾನು, ನನ್ನ ಮಗ ಗಿಗೀಶ್, ಪತ್ನಿ ಸುಜಿತಾ ಮತ್ತು ಅವರ ಮಕ್ಕಳಾದ ಸೂರಜ್ ಮತ್ತು ಮೃದುಲಾ. ನೀರು ನುಗ್ಗಿದಾಗ ನಾವೆಲ್ಲ ನಿದ್ದೆಯಲ್ಲಿದ್ದೆವು. ಮಗ ಗಿಗೀಶ್ ಪ್ರತಿಯೊಬ್ಬರನ್ನು ಹೊರಗೆ ತರುವುದರಲ್ಲಿ ಯಶಸ್ವಿಯಾದ. ಸುಜಿತಾಳ ಬೆನ್ನುಮೂಳೆಗೆ ಗಂಭೀರ ಪೆಟ್ಟಾಗಿದೆ. ಸೂರಜ್ ಎದೆಗೆ ಪೆಟ್ಟು ಬಿದ್ದಿದೆ. ಗಿಗೀಶನ ತಲೆಗೆ ಮರ ತಾಗಿ ಗಾಯವಾಗಿದೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.