ಮಂಗಳೂರು : ಬಂದರು ನಗರಿ ಹಾಗೂ ರಾಜಧಾನಿಯ ನಡುವೆ ಸುಗಮ ಸಂಚಾರಕ್ಕೆ ಹೊಸ ರೈಲು ಮಾರ್ಗ ನಿರ್ಮಾಣವಾಗಬೇಕು ಎಂಬ ಕನಸು ಬಹಳ ಹಳೆಯದು. ಆದರೆ ಪಶ್ಚಿಮ ಘಟ್ಟಗಳೇ ಉದ್ದೇಶಿತ ರೈಲು ಮಾರ್ಗಕ್ಕೆ ನೇರ ಸವಾಲು ಹೀಗಾಗಿ ಹೊಸ ರೈಲು ಮಾರ್ಗ ನಿರ್ಮಾಣ ತುಸು ಕಗ್ಗಂಟು.
ಕರಾವಳಿ ಮತ್ತು ಮಲೆನಾಡು ಸಂಪರ್ಕಿಸುವ ಮಾರ್ಗದಲ್ಲಿ ಹೊಸ ರೈಲು ಮಾರ್ಗ ನಿರ್ಮಾಣವಾಗಲಿದೆಯೇ?. ನೈಋತ್ಯ ರೈಲ್ವೆ ಈ ಕುರಿತು ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಲ್‌ಎಸ್) ನಡೆಸಲು ಟೆಂಡರ್ ಆಹ್ವಾನಿಸಿದೆ. ಈ ಪ್ರಸ್ತಾವಿತ ಮಾರ್ಗ 247 ಕಿ. ಮೀ. ಇರಲಿದ್ದು, ಅಂತಿಮ ವರದಿ ಬಳಿಕ ಮಾರ್ಗ ನಿರ್ಮಾಣ ಮಾಡುವ ಕುರಿತು ರೈಲ್ವೆ ಇಲಾಖೆ ಅಂತಿಮ ತೀರ್ಮಾನ ಮಾಡಲಿದೆ.
ಕರಾವಳಿ ಮತ್ತು ಮಲೆನಾಡು ಸಂಪರ್ಕಿಸಲು ಮಂಗಳೂರು-ಹಾಸನ ನಡುವೆ ಹೊಸ ರೈಲು ಮಾರ್ಗ ನಿರ್ಮಾಣವಾಗುವ ನಿರೀಕ್ಷೆ ಇದೆ. ಸದ್ಯ ಹಾಸನ-ಮಂಗಳೂರು ವಯಾ ಸಕಲೇಶಪುರ-ಸುಬ್ರಮಣ್ಯ ರೋಡ್ ಘಾಟ್ ಮೂಲಕ ರೈಲು ಸಂಚಾರವನ್ನು ನಡೆಸುತ್ತಿದೆ. ಆದರೆ ಈಗ ನೂತನ ಒಂದು ಅಥವ ದ್ವಿಪಥದ ರೈಲು ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ.
ದಕ್ಷಿಣ ಕನ್ನಡ ಭಾಗದ ಜನಪ್ರತಿನಿಧಿಗಳು ಮಂಗಳೂರು-ಹಾಸನ ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಮಾಡುವ ಕುರಿತು ಚಿಂತನೆ ನಡೆಸಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಈಗಿರುವ ರೈಲು ಮಾರ್ಗದಲ್ಲಿ ರೈಲುಗಳ ಕಾರ್ಯಾಚರಣೆಗೆ ಹಲವಾರು ಅಡ್ಡಿಗಳಿವೆ ಎಂದು ಹೇಳಿದ್ದರು.ಟೆಂಡರ್ ಕರೆದ ನೈಋತ್ಯ ರೈಲ್ವೆ: ಜನವರಿ 4ರಂದು ನೈಋತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿಗಳು ಮಂಗಳೂರು-ಹಾಸನ ನೂತನ ಮಾರ್ಗ ಹಾಗೂ 72 ಕಿ. ಮೀ. ಉದ್ದದ ಲೋಂಡಾ-ವಾಸ್ಕೋ-ಡಾ-ಗಾಮ ಸೆಕ್ಷನ್‌ನಲ್ಲಿನ ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಲ್‌ಎಸ್) ನಡೆಸಲು ಟೆಂಡರ್ ಆಹ್ವಾನಿಸಿದ್ದಾರೆ.
ಹಾಸನ-ಮಂಗಳೂರು ಅಂತಿಮ ಸ್ಥಳ ಸಮೀಕ್ಷೆ ವರದಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿ, ಪರಿಸರದ ಮೇಲೆ ಆಗುವ ಪ್ರಭಾವ, ಸಿಗ್ನಲ್ ಕೆಲಸಗಳು, ಹೊಸ ಮಾರ್ಗ ನಿರ್ಮಾಣದ ಸಿವಿಲ್ ಕೆಲಸಗಳು, ಒಂದು ಅಥವ ದ್ವಿಪಥ ನಿರ್ಮಾಣದ ಕುರಿತು ವಿವರಗಳನ್ನು ಒಳಗೊಂಡಿರಲಿದೆ.
ಹಾಲಿ ಇರುವ ಹಾಸನ-ಮಂಗಳೂರು ವಯಾ ಸಕಲೇಶಪುರ-ಸುಬ್ರಮಣ್ಯ ರೋಡ್ ರೈಲು ಮಾರ್ಗ 189 ಕಿ. ಮೀ. ದೂರವಿದೆ. ಆದರೆ ಈ ಮಾರ್ಗ ಘಾಟ್ ಪ್ರದೇಶದಲ್ಲಿದೆ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಅಪಾಯಕಾರಿಯಾಗಿದೆ. ಗುಡ್ಡ ಕುಸಿತ ಸೇರಿದಂತೆ ವಿವಿಧ ಕಾರಣಕ್ಕೆ ರೈಲುಗಳ ಸಂಚಾರ ಹಲವಾರು ದಿನಗಳ ಕಾಲ ಸ್ಥಗಿತವಾಗುತ್ತದೆ.
ಆದರೆ ಹಾಸನ-ಮಂಗಳೂರು ಪ್ರಸ್ತಾವಿತ ನೂತನ ರೈಲು ಮಾರ್ಗ 247 ಕಿ. ಮೀ. ಇರಲಿದೆ. ಈ ಮಾರ್ಗದಲ್ಲಿ ರೈಲುಗಳ ಸುಲಭ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು, ಕರಾವಳಿ ಮತ್ತು ಹಾಸನ ಹಾಗೂ ಹಾಸನ ಮೂಲಕ ಮೈಸೂರು, ಬೆಂಗಳೂರು ನಡುವಿನ ರೈಲು ಸಂಪರ್ಕ ಉತ್ತಮಗೊಳಿಸುವುದು ಚಿಂತನೆಯಾಗಿದೆ.
ಹಾಲಿ ಇರುವ ಹಾಸನ-ಮಂಗಳೂರು ವಯಾ ಸಕಲೇಶಪುರ ಮಾರ್ಗದ ವಿದ್ಯುದೀಕರಣ ಮತ್ತು ದ್ವಿಪಥ ನಿರ್ಮಾಣಕ್ಕೆ ಈಗಾಗಲೇ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ ಮಂಗಳೂರಿಗೆ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸಲು ಸಹ ಸಹಾಯಕವಾಗಲಿದೆ.
ಕಡಿದಾದ ಗುಡ್ಡ, ಪಶ್ಚಿಮ ಘಟ್ಟದ ದಟ್ಟ ಕಾಡುಗಳ ಕಾರಣಕ್ಕೆ ಈ ಮಾರ್ಗದಲ್ಲಿ ಹೊಸ ರೈಲು ಮಾರ್ಗ ನಿರ್ಮಾಣ ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಎಫ್‌ಎಲ್‌ಎಸ್ ವರದಿಯಲ್ಲಿ ಯಾವ ಅಭಿಪ್ರಾಯ ಬರಲಿದೆ ಎಂದು ಕಾದು ನೋಡಬೇಕಿದೆ.
(ಕೃಪೆ : ಅಂತರ್ಜಾಲ)